ಸಾಹಿತ್ಯ ಸಮ್ಮೇಳನ: ಆಪ್ ಮೂಲಕ ನೋಂದಾಯಿಸಿಕೊಂಡ ಪ್ರತಿನಿಧಿಗಳಿಗೆ ಮಾತ್ರ ವಸತಿ ಸೌಕರ್ಯ!

ಹೊಸದಿಗಂತ ವರದಿ,ಹಾವೇರಿ:

ಜನವರಿ ೬ ರಿಂದ ಮೂರು ದಿನಗಳ ಕಾಲ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ನೋಂದಾಯಿಸಿಕೊಳ್ಳಲು ಆಪ್ ರಚಿಸಲಾಗಿದೆ. ಆಪ್ ಮೂಲಕ ನೋಂದಾಯಿಸಿಕೊಂಡ ಪ್ರತಿನಿಧಿಗಳಿಗೆ ಮಾತ್ರ ವಸತಿ ಸೌಕರ್ಯ ಒದಗಿಸಲಾಗುವುದು. ಉಳಿದಂತೆ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಉಚಿತವಾಗಿ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ಈ ಕುರಿತಂತೆ ಎಲ್ಲ ಜಿಲ್ಲಾಧ್ಯಕ್ಷರು ಮಾಹಿತಿ ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಹೇಳಿದರು.
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ನಿಮಿತ್ತ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಸಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳ ನೋಂದಣಿ, ಪುಸ್ತಕ ಮಳಿಗೆಗಳ ನೋಂದಣಿ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿಗೆ ಆಪ್ ರಚಿಸಲಾಗಿದೆ. ಡಿ.೧ ರಿಂದ ನೋಂದಣಿ ಕಾರ್ಯ ಆರಂಭವಾಗಿವಾಗಿದೆ. ಡಿ.೧೮ರವರೆಗೆ ನೋಂದಣಿಗೆ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಸಾಹಿತ್ಯ ಆಧುನಿಕ ಕಾಲದ ಅಗತ್ಯಗಳಿಗೆ ತಕ್ಕಂತೆ ತನ್ನನ್ನು ಸಜ್ಜುಗೊಳಿಸಿಕೊಳ್ಳುತ್ತಿದೆ. ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಉದ್ದೇಶಿಸಿ ವ್ಯಾಪಕ ಚರ್ಚೆ ಮೂಲಕ ಪ್ರತಿನಿಧಿಗಳ ನೋಂದಣಿಗೆ ಮೊಬೈಲ್ ಆಪ್ ರಚನೆ ಮಾಡಲಾಗಿದೆ. ಆಪ್ ಬಳಸಲು ತೊಂದರೆಯಾದವರ ನೆರವಿಗೆ ೧೦ ಸಹಾಯವಾಣಿಗಳನ್ನು (ಹೆಲ್ಪ್‌ಲೈನ್) ಸಾಹಿತ್ಯ ಪರಿಷತ್ ಆರಂಭಿಸಿದೆ. ಯಾವುದೇ ತೊಡಕುಗಳಿದ್ದರೂ ಸಹಾಯವಾಣಿ ಮೊಬೈಲ್ ಸಂಖ್ಯೆ ೮೧೨೩೮೭೮೮೧೨/ ೯೪೪೮೫೧೯೦೭೩ / ೭೭೯೫೬೬೨೦೬೪ ಸಂಪರ್ಕಿಸಬಹುದು. ಇನ್ನು ಹೆಚ್ಚುವರಿ ಸಹಾಯವಾಣಿ ಸಂಖ್ಯೆಗಳನ್ನು ಶೀಘ್ರವೇ ಪ್ರಚುರಪಡಿಸಲಾಗುವುದು. ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿನಿಧಿಗಳ ನೋಂದಣಿಗೆ ಜಿಲ್ಲಾಧ್ಯಕ್ಷರುಗಳು, ತಾಲೂಕಾ ಅಧ್ಯಕ್ಷರುಗಳು ನೆರವು ನೀಡಬೇಕು. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಪ್ ಗ್ರೂಪ್‌ಗಳಲ್ಲಿ ಹೆಚ್ಚು ಪ್ರಚಾರಕೈಗೊಳ್ಳಲು ಜಿಲ್ಲಾ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಗೆ ಹಾಗೂ ಅಧ್ಯಕ್ಷರುಗಳಿಗೆ ಮನವಿ ಮಾಡಿಕೊಂಡರು.
ಡಿ.೧೮ರ ನಂತರ ಎಷ್ಟು ಜನ ಪ್ರತಿನಿಧಿಗಳು ನೋಂದಣಿಯಾಗಿದ್ದಾರೆ, ಯಾವ ಯಾವ ಜಿಲ್ಲೆ, ತಾಲೂಕಾವಾರು ಮಾಹಿತಿ ಹಾಗೂ ನೋಂದಣಿಯಾಗಿರುವ ಸಂಖ್ಯೆ ಮಾಹಿತಿಯನ್ನು ಜಿಲ್ಲಾಡಳಿತದೊಂದಿಗೆ ಹಂಚಿಕೊಳ್ಳಲಾಗುವುದು. ನೋಂದಾಯಿತ ಪ್ರತಿನಿಧಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ ಸಿಇಓ ಮಹಮ್ಮದ್ ರೋಷನ್ ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ.ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾ ಕಸಾಪ ಅಧ್ಯಕ್ಷ ವೈ.ವಿ.ಆಲದಕಟ್ಟಿ, ಕೇಂದ್ರ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!