ಕರ್ಫ್ಯೂ ಅಥವಾ ಲಾಕ್‌ಡೌನ್ ಇನ್ನೆರಡು ದಿನದಲ್ಲಿ ತೀರ್ಮಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಳಗಾವಿ: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ನೈಟ್ ಕರ್ಫ್ಯೂವನ್ನು ವಿಸ್ತರಣೆ ಮಾಡುವ ಕುರಿತು ಇನ್ನೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಲ್ಲಿ ಇಡೀ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿ ಕೆಲವೊಂದು ಒಮಿಕ್ರಾನ್ ಪ್ರಕರಣಗಳು ಕೂಡ ದೃಢಪಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ನಾಳೆ ನಾಡಿದ್ದು, ಪರಿಸ್ಥಿತಿಯನ್ನು ನೋಡಿಕೊಂಡು ಕಠಿಣ ಮಾರ್ಗಸೂಚಿಯ ಕುರಿತು ಕ್ರಮಕೈಗೊಳ್ಳುತ್ತೇವೆ ಎಂದರು.

ಗಡಿಯಲ್ಲಿ ಕಟ್ಟೆಚ್ಚರ ಅನಿವಾರ್ಯ
ಮಹಾರಾಷ್ಟ್ರ, ಮುಂಬೈನಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಂಕ್ರಾಮಿಕ ಸೋಂಕು ಸ್ಪೋಟವಾಗುತ್ತಿದೆ. ಮುಂಬೈ ಮತ್ತು ಕರ್ನಾಟಕದ ಜನರಲ್ಲಿ ಹೆಚ್ಚಿನ ಒಡನಾಟ ಮತ್ತು ವಹಿವಾಟು ಜಾಸ್ತಿ ಇರುವುದರಿಂದ ಗಡಿಯಲ್ಲಿ ಕಟ್ಟೆಚ್ಚರವಹಿಸಬೇಕೆಂದು ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಕರ್ನಾಟಕಕ್ಕೆ ಬರುವವರೆಲ್ಲರು ಕೋವಿಡ್ ಲಸಿಕೆ ಎರಡೂ ಡೋಸ್‌ಗಳನ್ನು ಪಡೆದಿರಬೇಕು. ಜೊತೆಗೆ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಕೂಡ ಇರಬೇಕೆಂದು ಆದೇಶಿಸಿದೆ. ಬೆಳಗಾವಿಯ ಚೆಕ್‌ಪೋಸ್ಟ್ ಜೊತೆಗೆ ಅಕ್ಕಪಕ್ಕದ ಚೆಕ್‌ಪೋಸ್ಟ್‌ಗಳನ್ನು ಕೂಡ ಬಿಗಿಗೊಳಿಸಲು ಸೂಚನೆ ಕೊಡಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಗಡಿಯಲ್ಲಿ 11 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇದು ಪ್ರಯಾಣಿಕರಿಗೆ ತೊಂದರೆಯಾದರೂ ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಂದು ಸಿಎಂ ಹೇಳಿದರು.

ನಾಳೆಯಿಂದ ಲಸಿಕಾ ಮಹಾ ಅಭಿಯಾನ
ಕೇವಲ ನಿರ್ಬಂಧ ಅಷ್ಟೇ ಅಲ್ಲ, ನಾವು ತಯಾರಿಯನ್ನೂ ಮಾಡಿಕೊಳ್ಳಬೇಕಾಗಿದೆ. ಕಳೆದ ಬಾರಿ ಆಮ್ಲಜನಕ ಕೊರತೆ ಉಂಟಾಗಿತ್ತು. ಈ ಸಲ ಅದನ್ನು ನೀಗಿಸುವ ಸಲುವಾಗಿ, ಸರಬರಾಜು ಅನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ತಯಾರಾಗಿಟ್ಟುಕೊಳ್ಳುವುದಕ್ಕೆ, ಹೆಚ್ಚುವರಿ ಬೆಡ್‌ಗಳು, ಐಸಿಯುಗಳನ್ನು ಸಿದ್ಧಪಡಿಸಿಕೊಳ್ಳಲು ಸೂಚಿಸಲಾಗಿದೆ. ರಾಜ್ಯದಲ್ಲಿ 4ಸಾವಿರಕ್ಕೂ ಹೆಚ್ಚು ಐಸಿಯುಗಳನ್ನು ಸಿದ್ಧಪಡಿಸಲಾಗಿದೆ ಎಂದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ನಾಳೆಯಿಂದ 15-18 ವರ್ಷ ಪ್ರಾಯದವರಿಗೆ ಲಸಿಕಾ ಮಹಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!