ಚಿಕ್ಕೋಡಿಯಲ್ಲೊಂದು ಕ್ಯಾಟ್ ಕುಟುಂಬ!

– ಚಂದ್ರಶೇಖರ. ಎಸ್ ಚಿನಕೇಕರ

ಮನೆಯಲ್ಲಿ ಸಾಕಿರುವ ಬೆಕ್ಕುಗಳನ್ನು ನೋಡಿದರೆ ಒಂದು ಕ್ಷಣ ಕಕ್ಕಾಬಿಕ್ಕಿಯಾಗುವುದು ಸಹಜ. ಯಾರೇ ಆಗಲಿ ಮನೆಯಲ್ಲಿ ಒಂದೋ..ಎರಡೋ..ಅಬ್ಬಬ್ಬಾ ಅಂದ್ರೆ ಮೂರು ಬೆಕ್ಕೋ..ನಾಯಿ ಸಾಕುತ್ತಾರೆ. ಆದರೆ ಚಿಕ್ಕೋಡಿ ಪಟ್ಟಣದಲ್ಲಿ ಕೇಶವ ಕಟಂ ಎಂಬುವವರ ಮನೆಯಲ್ಲಿ ಬರೋಬ್ಬರಿ 30 ಬೆಕ್ಕುಗಳನ್ನು ಸಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬೆಕ್ಕು ಸಾಕುವುದನ್ನು ಹವ್ಯಾಸ ಮಾಡಿಕೊಂಡಿರುವ ಕೇಶ ಕಟಂ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯಲ್ಲಿ ಉಪ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಚಿಕ್ಕೋಡಿ ಪಟ್ಟಣದ ಹೊರ ವಲಯದಲ್ಲಿ ಮನೆಯನ್ನು ಮಾಡಿಕೊಂಡಿರುವ ಕೇಶವ ಕಟಂ ಎಲ್ಲರಂತೆ ಒಂದು ಬೆಕ್ಕು ಸಾಕಿದ್ದರು. ಒಂದರ ನಂತರ ಮತ್ತೊಂದು, ಇನ್ನೊಂದು ಸೇರಿಕೊಂಡು 30 ಬೆಕ್ಕುಗಳು ಮನೆಯಲ್ಲಿ ಓಡಾಡಿಕೊಂಡಿವೆ. ಅಡುಗೆ ಮನೆ, ಪೂಜಾ ಕೋಣೆ, ಬೆಡ್ ರೂಮ್ ಸೇರಿದಂತೆ ಎಲ್ಲಡೆಯೂ ಬೆಕ್ಕಿನ ಉಪಟಳ ಇದ್ದರೂ ಮನೆಯವರೆಲ್ಲರೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
ಹೊರವಲಯದಲ್ಲಿರುವ ಮನೆಯಲ್ಲಿ ಒಂದೊಂದಾಗಿ ಬಂದ ಬೆಕ್ಕುಗಳ ಮರಿಗಳನ್ನು ರಕ್ಷಣೆ ಮಾಡುವ ಉದ್ದೇಶ ಸಾಕಾಣಿಕೆ ಮಾಡುತ್ತ ಬಂದಿದ್ದೇನೆ ಎಂದು ಕೇಶ ಕಟಂ ತಿಳಿಸಿದರು.

ವಿಶಿಷ್ಟ ಹೆಸರು: ಪ್ರಿನ್ಸ್, ಮೋನು, ಸೋನು, ಟಿಂಕಿ, ಪಿಂಕಿ, ಜಾನು, ಸ್ವೀಟಿ, ಗೋಲು, ಮೋಲು, ಕ್ಯಾಫಿ, ಮೋತಿ, ಮಾನ್ಯಾ, ಜೇನಿ, ಗಿಟ್ಟುಮಾಲ್, ಸಿಂಬಾ, ಬಿಚ್ಚಾ, ಸ್ಟೆಸ್ಸಿ, ಮಾಂಜ್ರು ಅನ್ನೋ ಹೆಸರಿನ ಮಾರ್ಜಾಲಗಳ ಜಾಲವೇ ಇವರ ಮನೆಯಲ್ಲಿ ಇದೆ. ಕಾಂಡ್ಯಾ, ರಾಖಿ ಹೆಸರಿನ ಎರಡು ನಾಯಿಗಳು ಇದ್ದು, ಹೆಸರು ಕೂಗಿದ ತಕ್ಷಣ ಬೆಕ್ಕು, ನಾಯಿಗಳು ಚಂಗನೆ ಬಂದು ನಿಲ್ಲುತ್ತವೆ. ಒಂದಕ್ಕೊಂದು ಚೆಲ್ಲಾಟವಾಡುತ್ತವೆ. ಬೆಳಿಗ್ಗೆ ಬಿಸ್ಕತ್, ಹಾಲು, ಬ್ರೆಡ್, ಮಧ್ಯಾಹ್ನ ಚಪಾತಿ, ಸಂಜೆ ಚಪಾತಿ, ಹಾಲು, ಮೀನು, ಪೆಡಿ ಗ್ರೀ ಹಾಕುತ್ತಾರೆ. ಹೀಗೆ ತಿಂಗಳಿಗೆ 10 ರಿಂದ 15 ಸಾವಿರ ರೂ. ಗಳನ್ನು ಬೆಕ್ಕು ಸಾಕುವುದಕ್ಕೆ ಖರ್ಚು ಮಾಡುತ್ತಾರೆ.

ಕೇಶವ ಕಟಂ ಅವರು ಮಾತ್ರವಲ್ಲ, ಪತ್ನಿ ಸುಪ್ರಿಂಯಾ, ಪುತ್ರಿಯರಾದ ಅಕ್ಷತಾ, ಶ್ರದ್ದಾ ಅವರೂ ಕೂಡ ಅಷ್ಟೇ ಶ್ರದ್ಧೆಯಿಂದ ಬೆಕ್ಕುಗಳನ್ನು ನೋಡಿಕೊಳ್ಳುತ್ತಾರೆ. ಬೆಕ್ಕು, ನಾಯಿಗಳಿಗೆ ಏನೇ ಆರೋಗ್ಯ ಸಮಸ್ಯೆಯಾದ್ರೂ ಕೂಡ ಅವುಗಳಿಗೆ ಔಷಧೋಪಚಾರ ಮಾಡುತ್ತಾರೆ. ಆಗಾಗ ಪಶು ವೈದ್ಯರನ್ನು ಕರೆ ತಂದು ಆರೋಗ್ಯ ಪರೀಕ್ಷೆ ಮಾಡಿಸುತ್ತಾರೆ. ಮನೆ ತುಂಬಾ ಬೆಕ್ಕುಗಳನ್ನು ಸಾಕಿರೋ ಇವರ ಮನೆತನದ ಅಡ್ಡ ಹೆಸರು ಕಟಂ ಅಂತಾ ಇದ್ದು, 30ಕ್ಕೂ ಹೆಚ್ಚು ಬೆಕ್ಕುಗಳನ್ನು ಸಾಕಿರುವುದರಿಂದ ಕಟಂ ಕುಟುಂಬಕ್ಕೆ ಕೆಲವರಂತೂ ಕ್ಯಾಟ್ ಫ್ಯಾಮಿಲಿ ಅಂತ ತಮಾಷೆಯಾಗಿ ಕರೆಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!