Friday, December 8, 2023

Latest Posts

ಸಿಲಿಕಾನ್ ಸಿಟಿಯಲ್ಲಿಂದು ಅನುಭವ ಹಂಚಲಿದ್ದಾರೆ ದಕ್ಷಿಣ ಕನ್ನಡದ ‘ಸ್ವಚ್ಛ ವಾಹಿನಿ ಸಾರಥಿ’!

-ಬಾಳೇಪುಣಿ

ನಾಳೆ (ಜು.15) ವಿಶ್ವ ಕೌಶಲ್ಯ ದಿನ. ಕರ್ನಾಟಕ ಸರಕಾರದ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮುನ್ನಾ ದಿನ ಅಂದರೆ ಇಂದು (ಜು.14) ಬೆಂಗಳೂರಿನಲ್ಲಿ ‘ವಿಶ್ವ ಕೌಶಲ್ಯ ದಿನಾಚರಣೆ’ಯನ್ನು ಹಮ್ಮಿಕೊಂಡಿದೆ.

ವಿಶ್ವ ಕೌಶಲ್ಯ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ವ್ಯಕ್ತಿಗಳ ಅನುಭವ ಹಂಚಿಕೆ ಒಂದು ಭಾಗವಾಗಿದೆ. ರಾಜ್ಯದ ಐದು ಗ್ರಾ.ಪಂ.ಗಳ ಸ್ವಚ್ಛ ವಾಹಿನಿಗಳಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿರುವ ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯರ ಅನುಭವ ಹಂಚಿಕೆಯೂ ಅದರಲ್ಲಿ ಒಂದು. ಧಾರವಾಡ ಜಿಲ್ಲೆಯ ಮಂಜುಳ ಮದನ ಬಾವಿ, ಕೊಪ್ಪಳ ಕುಷ್ಟಗಿ ತಾಲೂಕಿನ ಪೂರ್ಣಿಮಾ ಚಳಗೇರಿ, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಸರಿಪಾ ಬೂದಿಹಾಳ, ಕೋಲಾರ ನರಸಾಪುರದ ಸರಸ್ವತಿ ಮತ್ತು ದ.ಕ. ಜಿಲ್ಲೆ ಬಂಟ್ವಾಳದ ಪೆರುವಾಯಿ ಗ್ರಾ.ಪಂ.ನ ನಫೀಸಾ ತಸ್ಲಿ ವಿಶ್ವ ಕೌಶಲ್ಯ ದಿನಾಚರಣೆಯಲ್ಲಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.
ಉಪಾಧ್ಯಾಕ್ಷೆಯೂ ಹೌದು

ನಫೀಸಾ ಕಳೆದ ನಾಲ್ಕೈದು ತಿಂಗಳುಗಳಿಂದ ಪೆರುವಾಯಿ ಗ್ರಾ.ಪಂ.ನ ಸ್ವಚ್ಛ ವಾಹಿನಿಯ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಅದೇ ಗ್ರಾ.ಪಂ.ನ ಉಪಾಧ್ಯಕ್ಷರೂ ಹೌದು. ಪೆರುವಾಯಿ ಗ್ರಾಮ ಪಂಚಾಯತ್‌ನ ಸ್ವಚ್ಛ ವಾಹಿನಿಗೆ ವನಿತಾ ಅವರು ಖಾಯಂ ಚಾಲಕರು. ಅವರ ಅನಾರೋಗ್ಯದಿಂದಾಗಿ ಸ್ವಚ್ಛ ವಾಹಿನಿಗೆ ಚಾಲಕರ ಕೊರತೆ ಇತ್ತು. ತ್ಯಾಜ್ಯ ನಿರ್ವಹಣೆಗೆ ಸ್ವಚ್ಛ ವಾಹಿನಿ ಓಡಲೇಬೇಕಿತ್ತು. ನಫೀಸಾ ಆಗಲೇ ವಾಹನ ಚಾಲನಾ ಪರವಾನಗಿ ಹೊಂದಿದ್ದರು. ‘ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ನೀವೇ ವಾಹನ ಓಡಿಸಿ ಎಂದು ಪ್ರೇರೇಪಿಸಿದರು. ನನ್ನ ಗ್ರಾಮ ಪಂಚಾಯತು ತ್ಯಾಜ್ಯ ನಿರ್ವಹಣೆಯಲ್ಲಿ ಹಿಂದೆ ಉಳಿಯಬಾರದು’ ಎಂದು ಸ್ವಚ್ಛ ವಾಹಿನಿ ಏರಿದೆ ಎನ್ನುತ್ತಾರೆ ನಫೀಸಾ.

ಮನೆಯವರ ಸಹಕಾರ ಇದೆ

ಕೆಲಸ ಯಾವುದಾದರೇನು ಸರ್, ನನ್ನ ಗ್ರಾ.ಪಂ. ತ್ಯಾಜ್ಯ ನಿರ್ವಹಣೆಯಲ್ಲಿ ಯಾಕೆ ಹಿಂದೆ ಉಳಿಯಬೇಕು. ಅದಕ್ಕಾಗಿ ಸ್ವಚ್ಛ ವಾಹಿನಿಯ ಚಾಲಕಿಯಾಗಿದ್ದೇನೆ. ಪತಿ ಮತ್ತು ಕುಟುಂಬದ ಇತರ ಸದಸ್ಯರ ಬೆಂಬಲ ಮತ್ತು ಸಹಕಾರ ಇದೆ. ಗ್ರಾಮಾಡಳಿತದ ಸಹಕಾರವೂ ಇದೆ ಎನ್ನುತ್ತಾರೆ ಅವರು.

ಇತರರಿಗೆ ಪ್ರೇರಣೆ

ನಫೀಸಾ ತುಂಬಾ ಚುರುಕಾಗಿ ಕೆಲಸ ನಿರ್ವಹಿಸುತ್ತಾರೆ. ಗ್ರಾಮಾಡಳಿತದ ಉಪಾಧ್ಯಕ್ಷೆಯಾಗಿ ಚಾಲಕರ ಅನುಪಸ್ಥಿತಿಯಲ್ಲಿ ಕಸ ಸಂಗ್ರಹದ ವಾಹನ ದಲ್ಲಿ ಚಾಲಕರಾಗಿ ಕೆಲಸ ಮಾಡುವ ಅವರು ಇತರರಿಗೆ ಪ್ರೇರಣೆಯಾಗಿದ್ದಾರೆ ಎನ್ನುತ್ತಾರೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಬಂಟ್ವಾಳ ತಾಲೂಕು ವ್ಯವಸ್ಥಾಪಕಿ ಸುಧಾ ಕೆ.

ನಮ್ಮಲ್ಲಿ ತ್ಯಾಜ್ಯ ಸಂಗ್ರಹ ಮಾಡುವ ಸ್ವಚ್ಛ ವಾಹಿನಿಗೆ ಒಬ್ಬರು ತರಬೇತಿ ಪಡೆದ ಚಾಲಕರಿದ್ದಾರೆ. ಆದರೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಮ್ಮ ಉಪಾಧ್ಯಕ್ಷರು ಸ್ವಯಂಪ್ರೇರಿತರಾಗಿ ಕಸ ಸಂಗ್ರಹಿಸುವ ವಾಹನದ ಚಾಲಕರಾಗಿ ಸೇವೆ ಮಾಡುತ್ತಿದ್ದಾರೆ ಎನ್ನುತ್ತಾರೆ ಪಿಡಿಒ ಅಶೋಕ್. ಪೆರುವಾಯಿ ಗ್ರಾಮ ಪಂಚಾಯತ್ ದಕ್ಷಿಣದಲ್ಲಿ ಕೇರಳಕ್ಕೆ ತಾಗಿಕೊಂಡಿದ್ದು, ೮ ಸದಸ್ಯರನ್ನು ಹೊಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!