ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದಲ್ಲಿ ದಲಿತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಮೂವರನ್ನು ಬಂಧಿಸಲಾಗಿದೆ. ವಿದ್ಯುತ್ ಕಂಬಕ್ಕೆ 21 ವರ್ಷದ ದಲಿತ ಸಮುದಾಯದ ಯುವಕನನ್ನು ಕಟ್ಟಿಹಾಕಿ ಯುವಕರ ಗುಂಪು ಮನಸೋ ಇಚ್ಛೆ ಹಲ್ಲೆ ಮಾಡಿದ ಘಟನೆ ಕೊಪ್ಪಳ ತಾಲ್ಲೂಕಿನ ಬೋಚನಹಳ್ಳಿ ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಮಾದಿಗ ಸಮುದಾಯದ ಗುಡ್ಡದಪ್ಪ ಮುಲ್ಲಣ್ಣ ಎಂದು ಗುರುತಿಸಲಾಗಿದೆ. ನಂತರ ಯುವಕ ಅಳವಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಾಲ್ಮೀಕಿ ಸಮುದಾಯದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿ ನಾನು ಸಿಗರೇಟು ಸೇದಿದ್ದೆ ಎಂದು ಆಕ್ರೋಶದಿಂದ ಯುವಕರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನೀನು ಮಾದಿಗ ಸಮುದಾಯದವನು ಬೇರೆಯವರ ಜೊತೆ ಬೆರೆಯಬಾರದು ಎಂದು ಬೆಳಗ್ಗೆ ಬೈದಿದ್ದರು. ಸಾಯಂಕಾಲ ಎಲೆಕ್ಟ್ರಿಕ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಹೀಗೆ ಯುವಕನಿಗೆ ಬೈದಿದ್ದ ಆರು ಮಂದಿಯಲ್ಲಿ ಮೂವರನ್ನು ಬಂಧಿಸಲಾಗಿದೆ. ಹಲ್ಲೆ ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಯುವಕ ನಾಗನಗೌಡ ಪೊಲೀಸ್ ಪಾಟೀಲ್ ಗುಡ್ಡದಪ್ಪನ ವಿರುದ್ಧ ಪ್ರತಿದೂರು ನೀಡಿದ್ದು, ಗುಡ್ಡದಪ್ಪ ಮತ್ತು ಅವನ ಕುಟುಂಬಸ್ಥರು ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾನೆ.