ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ತಮ್ಮ ನೇತೃತ್ವದ ಐವರು ಸದಸ್ಯರ ಸಮಿತಿಯು ತಾರ್ಕಿಕ ಘಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಹಿಂದಿನ ಹಗರಣಗಳ ತನಿಖೆಯನ್ನು ತ್ವರಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಚಿಸಿರುವ ಪರಮೇಶ್ವರ್ ನೇತೃತ್ವದ ಸಮಿತಿಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಮತ್ತು ಎಚ್‌ಕೆ ಪಾಟೀಲ್ ಕೂಡ ಇದ್ದಾರೆ.
ವಿಧಾನಸೌಧದಲ್ಲಿ ಮೂರು ಗಂಟೆಗಳ ಕಾಲ ನಡೆಸಿದ ಸರಣಿ ಸಭೆಯಲ್ಲಿ ಹಲವು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಆದರೆ, ಎಚ್.ಕೆ.ಪಾಟೀಲ್ ಗೈರು ಹಾಜರಾಗಿದ್ದರು. ಸಭೆ ಮುಗಿದ ನಂತರ ಸಚಿವರು ಪ್ರತ್ಯೇಕವಾಗಿ ಸಭೆ ನಡೆಸಿದರು.
ತನಿಖೆ ಪೂರ್ಣಗೊಂಡ ಪ್ರಕರಣಗಳನ್ನು ನಾವು ಮುಟ್ಟುವುದಿಲ್ಲ, ಆದರೆ ತನಿಖೆ ನಡೆಯುತ್ತಿರುವ ಪ್ರಕರಣಗಳನ್ನು ಮಾತ್ರ ಪರಿಶೀಲಿಸುತ್ತೇವೆ. ಹೊಸ ಹಗರಣಗಳನ್ನು ಸಹ ಪರಿಶೀಲಿಸುತ್ತೇವೆ. ಇಂದು 3-4 ಪ್ರಕರಣಗಳನ್ನು ಚರ್ಚಿಸಿದ್ದೇವೆ ಎಂದು ಡಾ ಪರಮೇಶ್ವರ್ ಹೇಳಿದರು.