ಸಿದ್ದರಾಮಯ್ಯರಿಂದ ದಲಿತರಿಗೆ ಮಹಾ ಮೋಸ, ಕಾಂಗ್ರೆಸ್ ವಂಚಕರ ಸಂತೆ-ಛಲವಾದಿ ನಾರಾಯಣಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿದ್ದರಾಮಯ್ಯರಿಂದ ದಲಿತರಿಗೆ ಮಹಾ ಮೋಸ ಆಗುತ್ತಿದೆ. ಕಾಂಗ್ರೆಸ್ ಪಕ್ಷವೇ ವಂಚಕರ ಸಂತೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಕಡೆ ವರ್ಗಾಯಿಸಲು ನೆರವಾಗುವ ಮೂಲಕ, ದಲಿತರ ಸಂಹಾರದ ನೀಚ ಕೆಲಸಕ್ಕೆ ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಸಹಕಾರ ಮಾಡಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ಬಿಸಾಡಿ ಹೊರಕ್ಕೆ ಬರಲಿ ಎಂದು ಸವಾಲೆಸೆದರು. ಇಲ್ಲವಾದರೆ ಕಾಂಗ್ರೆಸ್ ದಲಿತ ನಾಯಕರು ಧ್ವನಿರಹಿತರು ಮತ್ತು ಬೋನ್‍ಲೆಸ್ ಎಂದು ಕರೆಯಬೇಕಾದೀತು ಎಂದರು.

ಎಸ್‌ಸಿ, ಎಸ್‌ಸಿ ಹಣ ಬೇರೆಡೆಗೆ ವರ್ಗಾವಣೆ 

ನಾನು ಕೆಲವು ದಿನಗಳ ಹಿಂದೆ ಮಾಡಿದ್ದ ಆಪಾದನೆ ಪ್ರಮುಖವಾಗಿ ಪ್ರಕಟವಾಗಿರಲಿಲ್ಲ. ಈಗ ಅದು ಮಾಧ್ಯಮಗಳಿಂದಾಗಿ ಪ್ರಚುರ ಪಡೆದಿದೆ. ಬಜೆಟ್‍ನ ಶೇ 24.1 ಹಣವನ್ನು ಎಸ್‍ಸಿ, ಎಸ್‍ಟಿ ಶ್ರೇಯೋಭಿವೃದ್ಧಿಗೆ ಬಳಸಲು ಸಿದ್ದರಾಮಯ್ಯನವರು ಒತ್ತಾಯಿಸಿದ್ದರು. ಆ ಎಸ್.ಸಿ.ಎಸ್.ಟಿ.-ಟಿ.ಎಸ್.ಪಿ.ಯ ಹಣವನ್ನು 2013ರಲ್ಲಿ 7ಡಿ ನಿಯಮಾವಳಿ ಮೂಲಕ ಬೇರೆಡೆಗೆ ವರ್ಗಾಯಿಸಿದ್ದರು ಕೂಡ. ಬಸವರಾಜ ಬೊಮ್ಮಾಯಿ 7ಡಿ ರದ್ದು ಮಾಡಿದ್ದು, ಈಗ 7ಡಿ ರದ್ದಾಗಿದೆಯಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ಶೋಷಿತರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯದ ಸೌಕರ್ಯ, ಶೋಷಣೆರಹಿತ ಘನತೆಯ ಬದುಕು ಬೇಕೇ ವಿನಃ ನಿಮ್ಮ ಬಿಟ್ಟಿ ಅಲ್ಲ. ಶೇ 24.1 ಎಂದು ಮೀಸಲಿಟ್ಟು, ಅದನ್ನೆಲ್ಲ ಬೇರೆ ಇಲಾಖೆಗೆ ಕೊಟ್ಟು ದಲಿತರಿಗೆ ಕೆಟ್ಟ ಹೆಸರನ್ನು ತರುತ್ತೀರಿ ಎಂದು ಟೀಕಿಸಿದರು.

ನಾವು ಪೌರಕಾರ್ಮಿಕರ ಖಾಯಂ ಮಾಡಿದ್ದೆವು. ನಾವು ದಲಿತರಿಗೆ ನ್ಯಾಯ ಕೊಟ್ಟಿದ್ದೇವೆ. ದಲಿತರ ಸಮಸ್ಯೆ ಮತ್ತು ವಿಚಾರ ಬಂದಾಗ ಹಕ್ಕು ಕೇಳುವ ಕೆಲಸ ಮಾಡಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಹೊರಕ್ಕೆ ಬನ್ನಿ ಎಂದು ಆಗ್ರಹಿಸಿದರು. ಆಪತ್ತು ಬಂದಾಗ ಕಾಂಗ್ರೆಸ್ ಪಕ್ಷ ದಲಿತರ ಕಾರ್ಡ್ ಬಳಸುತ್ತದೆ. 2006ರಲ್ಲಿ ಖರ್ಗೆಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಬಳಿಕ ಪರಮೇಶ್ವರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಅಧಿಕಾರ ಬಂದಾಗಲೂ ದಲಿತರನ್ನು ಸಿಎಂ ಮಾಡಲಿಲ್ಲ. ಬದಲಾಗಿ ಪಕ್ಷಕ್ಕೆ ವಲಸೆ ಬಂದ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದ್ದರು ಎಂದು ಆಕ್ಷೇಪಿಸಿದರು.

ಕೆಲ ದಲಿತ ನಾಯಕರು ಮತ್ತು ಸಂಘಟನೆಗಳು ಪ್ಯಾಕೇಜ್ ಸಂಘಟನೆಗಳಾಗಿವೆ

ಎಐಸಿಸಿಯಲ್ಲಿ ಅಧ್ಯಕ್ಷರನ್ನಾಗಿ ಖರ್ಗೆಯವರನ್ನು ಮಾಡಿದ್ದು ಇದೇ ಕಾರಣಕ್ಕೆ. ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಾಕಿದವರು ಅಮಾಯಕರು ಎಂದು ಹೇಳಿದ್ದು, ದಲಿತ ವಿರೋಧಿಯಲ್ಲವೇ?. ಕೆಲವು ದಲಿತ ನಾಯಕರು ಮತ್ತು ಸಂಘಟನೆಗಳು ಪ್ಯಾಕೇಜ್ ಸಂಘಟನೆಗಳಂತೆ ಕೆಲಸ ಮಾಡುತ್ತಿವೆ. ದಲಿತರಿಗೆ ಆಗುತ್ತಿರುವ ಅನ್ಯಾಯ ಕಂಡರೂ ಸುಮ್ಮನಿರುವ ಅವರ ಸ್ವರ ಎಲ್ಲಿ ಅಡಗಿದೆ ಎಂದು ಕೇಳಿದರು.

ಕಾಮಾಲೆ ಕಣ್ಣಿನಿಂದ ಪಕ್ಷಗಳನ್ನು ನೋಡದಿರಿ ಎಂದು ದಲಿತ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ ಅವರು, ಪ್ಯಾಕೇಜ್ ಬೆಂಬಲ ನೀಡದಿರಿ ಎಂದು ತಿಳಿಸಿದರು. ಕೆಲವು ದಲಿತ ಸಂಘಟನೆಗಳಿಗೆ ಕಾಂಗ್ರೆಸ್‍ನ ಸುಳ್ಳುಗಳೂ ಸತ್ಯ ಎನಿಸುತ್ತಿದೆ. ಕಾಂಗ್ರೆಸ್ ಸುಡುವ ಮನೆ, ದಲಿತರಿಗೆ ಭವಿಷ್ಯ ಇಲ್ಲ ಎಂದು ಡಾ. ಅಂಬೇಡ್ಕರರು ಹೇಳಿದ್ದರು. ಕೆಲವು ದಲಿತ ಸಂಘಟನೆಗಳ ಈಗಿನ ನಡೆ ಬಾಬಾಸಾಹೇಬ ಅಂಬೇಡ್ಕರರಿಗೆ ಮಾಡಿದ ಅಪಚಾರ ಎಂದು ಆಕ್ರೋಶ ಹೊರಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!