ಪಿಎಫ್​ಐಯಿಂದ ಸಾರ್ವಜನಿಕ ಆಸ್ತಿಗೆ ಹಾನಿ: ವಸೂಲಿ ವಿಳಂಬಕ್ಕೆ ಹೈಕೋರ್ಟ್ ಬಳಿ ಕ್ಷಮೆ ಕೋರಿದ ಕೇರಳ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೇರಳದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ನಡೆಸಿದ್ದ ಹರತಾಳದ ವೇಳೆ ಉಂಟಾದ ಸಾರ್ವಜನಿಕ ಆಸ್ತಿ-ಪಾಸ್ತಿಯ ಹಾನಿಯ ನಷ್ಟ ವಸೂಲಿ ಮಾಡುವಲ್ಲಿ ಸರಕಾರ ವಿಳಂಬವಾಗಿರುವುದಕ್ಕೆ ಹೈಕೋರ್ಟ್ ಬಳಿ ಕ್ಷಮೆ ಕೋರಿದೆ.

ಹರತಾಳದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಯ ಹಾನಿಯಾಗಿದ್ದು, ಈ ಕಾರಣ ಭಾಗಿಯಾದವರ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರ ಆಸ್ತಿಗಳನ್ನು ಗುರುತಿಸಿ ಜನವರಿ 15ರ ಒಳಗಾಗಿ ವಶಪಡಿಸಿಕೊಳ್ಳಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶ ಬೇಕು ಎಂದು ಹೈಕೋರ್ಟ್​​ಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಹರತಾಳದ ಹಿಂಸಾಚಾರದ ವೇಳೆ ರಾಜ್ಯ ಸಾರಿಗೆ ಸಂಸ್ಥೆಗೆ ಆದ ಹಾನಿಗೆ ಸಂಬಂಧಿಸಿ 5.2 ಕೋಟಿ ರೂ. ಠೇವಣಿ ಇಡುವಂತೆ ಈ ಹಿಂದೆ ಪಿಎಫ್​ಐ ಸಂಘಟನೆಯ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್​​ಗೆ ಹೈಕೋರ್ಟ್ ಸೂಚಿಸಿತ್ತು. ನಷ್ಟಕ್ಕೆ ಪಿಎಫ್​ಐಯನ್ನೇ ಪ್ರಮುಖ ಹೊಣೆಯನ್ನಾಗಿ ಮಾಡಬೇಕು ಎಂದು ಸರ್ಕಾರಕ್ಕೆ ತಿಳಿಸಿತ್ತು.

ಆದ್ರೆ ನಷ್ಟ ವಸೂಲಾತಿ ಮಾಡುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಕಳೆದ ವಾರ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಜತೆಗೆ, ಜನವರಿಯ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಈ ಬಗ್ಗೆ ರಾಜ್ಯ ಸರಕಾರ ತಮ್ಮ ಕಡೆಯಿಂದ ಉದ್ದೇಶಪೂರ್ವಕ ವಿಳಂಬ ಆಗಿಲ್ಲ. ವಸೂಲಾತಿ ಪ್ರಕ್ರಿಯೆಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಭೂ ಕಂದಾಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಸೆಪ್ಟೆಂಬರ್​ನಲ್ಲಿ ರಾಜ್ಯವ್ಯಾಪಿ ಹರತಾಳದ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಂದ 86 ಲಕ್ಷ ರೂ. ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ ಎಂದು ಸರ್ಕಾರವು ನವೆಂಬರ್ 7ರಂದು ಹೈಕೋರ್ಟ್​ಗೆ ತಿಳಿಸಿತ್ತು. ಖಾಸಗಿ ಕ್ಷೇತ್ರದವರಿಗೆ 16 ಲಕ್ಷ ರೂ. ನಷ್ಟವಾಗಿರುವುದಾಗಿಯೂ ತಿಳಿಸಿತ್ತು. ಈವರೆಗೆ ರಾಜ್ಯ ಪೊಲೀಸರು 361 ಪ್ರಕರಣಗಳನ್ನು ದಾಖಲಿಸಿದ್ದು, 2,674 ಜನರನ್ನು ಬಂಧಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!