ಹೊಸದಿಗಂತ ವರದಿ ಉತ್ತರಕನ್ನಡ:
ಡ್ರಗ್ಸ್ ಮಾರಾಟ, ಸಾಗಣೆ ಮತ್ತು ಸಂಗ್ರಹಣೆ ಚಟುವಟಿಕೆಯಲ್ಲಿ ತೊಡಗಿದ್ದ ದಾಂಡೇಲಿಯ ಡ್ರಗ್ ಪೆಡ್ಲರ್’ಗೆ ಬಂಧನದಲ್ಲಿಡಲು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರು ಆದೇಶವನ್ನು ಹೊರಡಿಸಿದ್ದು, ಈ ನಿಟ್ಟಿನಲ್ಲಿ ಆತನನ್ನು ಬಂಧಿಸಿ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ನಗರದ ಸುಭಾಷ ನಗರ ನಿವಾಸಿಯಾದ ಆಯಾನ್ ಅಲಿಯಸ್ ಶಾನವಾಜ್ ತಂದೆ ಇಮ್ಮಿಯಾಜ್ ಖಾನ್, (ವ : 23 ವರ್ಷ) ಈತನು ಮಾದಕ ವಸ್ತುಗಳ ಸಂಗ್ರಹ, ಸಾಗಾಟ/ಸರಬರಾಜು ಮತ್ತು ಮಾರಾಟ ಮಾಡುವ ವೃತ್ತಿಪರ ಡ್ರಗ್ ಪೆಡ್ಲರ್ ಆಗಿದ್ದು, ಈತನ ಮೇಲೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ 05 ಪ್ರಕರಣಗಳು ಹಾಗೂ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ಎನ್.ಡಿ.ಪಿ.ಎಸ್ ಕಾಯಿದೆಯ ಅಡಿಯಲ್ಲಿ ಒಟ್ಟೂ 06 ಪ್ರಕರಣಗಳು ದಾಖಲಾಗಿರುತ್ತದೆ.
ಈತನ ಮೇಲೆ ಪ್ರಕರಣಗಳು ದಾಖಲಾಗಿದ್ದರೂ ಸಹ ಈತನು ಕಾನೂನು ಬಾಹಿರ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆಯಲ್ಲಿ ತೊಡಗಿಕೊಂಡಿದ್ದರಿಂದ ಈತನಿಗೆ ಅಪರಾಧ ಪ್ರಕರಣಗಳಲ್ಲಿ ಹಲವಾರು ಬಾರಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ, ಸುಧಾರಣೆಗೊಳ್ಳದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಪದೇ ಪದೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುತ್ತಿದ್ದಾನೆ.
ಇದರಿಂದ ಕಾನೂನು ಸುವ್ಯವಸ್ಥೆ ಧಕ್ಕೆಯಾಗುವುದರ ಜೊತೆಗೆ ಯುವ ಜನತೆಯ ಆರೊಗ್ಯ, ಭವಿಷ್ಯ ಮತ್ತು ಆರ್ಥಿಕತೆಯ ಮೇಲೆ ಅಡ್ಡಪರಿಣಾಮ ಬಿರುತ್ತದೆ. ಹಾಗೆಯೇ ಅನೇಕ ಕುಟುಂಬಗಳು ಇದರ ಜಾಲಕ್ಕೆ ಸಿಲುಕಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈತನು ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಅದನ್ನೇ ತನ್ನ ವೃತ್ತಿಯನ್ನಾಗಿಸಿಕೊಂಡು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವ ಸಾಧ್ಯತೆಗಳು ಹೆಚ್ಚಿಗೆ ಕಂಡುಬಂದಿದ್ದರಿಂದ ಈತನ ಚಟುವಟಿಕೆಗಳನ್ನು ನಿಯಂತ್ರಿಸಲು PIT NDPS -1988 ರ ಉಪಕಲಂ: (1) ಕಲಂ: 3 ರಡಿಯಲ್ಲಿ ಬಂಧನದಲ್ಲಿಡಲು ದಾಂಡೇಲಿಯ ಡಿವೈಎಸಿ ಹಾಗೂ ಸಿಪಿಐ ಅವರ ಕೋರಿಕೆ ಅರ್ಜಿಯನ್ನು ಪೊಲೀಸ್ ಅಧೀಕ್ಷಕರ ಮುಖಾಂತರ ಪೊಲೀಸ್ ಮಹಾನಿರೀಕ್ಷಕರು ಪಶ್ಚಿಮ ವಲಯ ಮಂಗಳೂರು ರವರಿಗೆ ವಿವರವಾದ ವರದಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ನಿವೇದಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ:
ಈ ಬಗ್ಗೆ ಪೊಲೀಸ್ ಮಹಾನಿರೀಕ್ಷಕರು ಪಶ್ಚಿಮ ವಲಯ ಮಂಗಳೂರು ರವರು The Prevention of Illicit Traffic in Narcotic Drugs and Psychotropic Substances Act -1988 (ತಿದ್ದುಪಡಿ) ರ ಉಪ ಕಲಂ: (1) ಕಲಂ: 3 ರ ಅಡಿಯಲ್ಲಿ ಡ್ರಗ್ ಪೆಡ್ಲರ್ ಆಸಾಮಿಯಾದ ಆಯಾನ್ @ ಶಾನವಾಜ್ ತಂದೆ ಇಮ್ಮಿಯಾಜ್ ಖಾನ್ ನನ್ನು ಬಳ್ಳಾರಿ ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿ ಇಡಲು ಆದೇಶಿಸಿರುತ್ತಾರೆ. ಈ ನಿಟ್ಟಿನಲ್ಲಿ ಈತನನ್ನು ಬಂಧಿಸಿ ಬಳ್ಳಾರಿ ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
PIT NDPS ಕಾಯಿದೆಯು ಡ್ರಗ್ಸ್ ಮಾರಾಟ, ಸಾಗಣೆ ಮತ್ತು ಸಂಗ್ರಹಣೆ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಸಮಾಜಕ್ಕೆ ಅಪಾಯಕಾರಿಯೆಂದು ಪರಿಗಣಿಸಿ, ಅವರು ಮುಂದುವರಿದು ಅಪರಾಧ ಮಾಡದಂತೆ ಮುನ್ನೆಚ್ಚರಿಕಾ ಬಂಧನ ಮಾಡುವ ಕಾನೂನಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ PIT NDPS ಕಾಯಿದೆಯ ಮೂಲಕ ಡ್ರಗ್ ಪೆಡ್ಲರನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ ಮೊದಲನೇ ಪ್ರಕರಣವಾಗಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯನ್ನು ನಶೆ ಮುಕ್ತ ಜಿಲ್ಲೆಯನ್ನಾಗಿಸುವ ಭಾಗವಾಗಿರುತ್ತದೆ. ಪೊಲೀಸ್ ಇಲಾಖೆ ಮಾದಕ ವಸ್ತುಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಯುವಜನತೆ ಹಾಗೂ ಸಾರ್ವಜನಿಕರು ಡ್ರಗ್ಸ್ ಸಂಬಂಧಿತ ಅಕ್ರಮ ಚಟುವಟಿಕೆಗಳಿಂದ ದೂರವಿರಲು ಸೂಚಿಸಲಾಗಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ನಡೆಯುವ ಅನುಮಾನಾಸ್ಪದ ಡ್ರಗ್ಸ್ ಮಾರಾಟ ಅಥವಾ ಸಾಗಣೆ ಕುರಿತು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.



