Tuesday, March 21, 2023

Latest Posts

G20 ಸಭೆಗೆ ಡೇಟ್ ಫಿಕ್ಸ್: ವಿವಿಧ ದೇಶಗಳ ಪ್ರತಿನಿಧಿಗಳು ಭಾಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಹುನಿರೀಕ್ಷಿತ ಜಿ20 ಸಭೆಗಳು (G20 Meet) ಇದೇ ಫೆಬ್ರುವರಿ 22ರಿಂದ 25ರವರೆಗೆ ಬೆಂಗಳೂರಿನಲ್ಲಿ ನಡೆಯಲಿವೆ.
ಮೊದಲ ಜಿ20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರುಗಳ ಸಭೆ (G20 FMCBG) ನಡೆಯಲಿದೆ. ಜೊತೆಗೆ, ಜಿ20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಡೆಪ್ಯೂಟಿ (G20 FCBD) ಸಭೆ ಕೂಡ ನಡೆಯಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಕೇಂದ್ರ ಹಣಕಾಸು ಸಚಿವಾಲಯ, ಮೊದಲಿಗೆ ಫೆಬ್ರುವರಿ 22ರಂದು ಜಿ20 ಎಫ್​ಸಿಬಿಡಿ ಸಭೆ ಆಗಲಿದ್ದು, ಆರ್​ಬಿಐನ ಡೆಪ್ಯೂಟಿ ಗವರ್ನರ್ ಡಾ. ಮೈಕೇಲ್ ಡಿ ಪಾತ್ರ ಮತ್ತು ಕೇಂದ್ರ ಆರ್ಥಿಕ ವ್ಯವಹಾರ ಇಲಾಖೆ ಕಾರ್ಯದರ್ಶಿ ಅಜಯ್ ಸೇಠ್ ಜಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಜಿ20 ದೇಶಗಳ ಹಣಕಾಸು ಇಲಾಖೆ ಉನ್ನತ ಸ್ತರದ ಅಧಿಕಾರಿಗಳು ಮತ್ತು ಸೆಂಟ್ರಲ್ ಬ್ಯಾಂಕು ಡೆಪ್ಯೂಟಿ ಗವರ್ನರುಗಳ ಸಭೆ ಆಗಲಿದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ, ಯುವಜನ ವ್ಯವಹಾರ ಹಾಗು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ಸಭೆಯ ಉದ್ಘಾಟನೆ ಮಾಡಲಿದ್ದಾರೆ.

ಬಳಿಕ ಜಿ20 ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರುಗಳ ಸಭೆ ಫೆಬ್ರುವರಿ 24 ಮತ್ತು 25ರಂದು ನಡೆಯಲಿದೆ. ಇದು ಜಿ20 ಗುಂಪಿನ ಅಧ್ಯಕ್ಷತೆ ಭಾರತಕ್ಕೆ ಸಿಕ್ಕ ಬಳಿಕ ನಡೆಯುತ್ತಿರುವ ಮೊದಲ ಸಭೆಯಾಗಿದೆ. ಇಲ್ಲಿ 20 ದೇಶಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಇದರ ಜೊತೆಗೆ ಆಹ್ವಾನಿತ ಸದಸ್ಯರು, ಹಾಗೂ ಕೆಲ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸಭೆಗೆ ಬರಲಿದ್ದಾರೆ. ಒಟ್ಟು 72 ಪ್ರತಿನಿಧಿಗಳು ಬೆಂಗಳೂರಿನಲ್ಲಿ ನಡೆಯಲಿರುವ ಜಿ20 ಎಫ್​ಎಂಸಿಬಿಜಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಭೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್​ಬಿಐ ಗವರ್ನರ್ ಡಾ. ಶಕ್ತಿಕಾಂತ ದಾಸ್ ಜಂಟಿ–ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಜಿ20 ಸಭೆಗೆ ಬರುವ ಪ್ರತಿನಿಧಿಗಳು ಇದೇ ವೇಳೆ ಬೆಂಗಳೂರಿನಲ್ಲಿರುವ ಐಐಎಸ್​ಸಿಗೆ ಹೋಗಿ ಅಲ್ಲಿನ ತಂತ್ರಜ್ಞಾನ ಅವಿಷ್ಕಾರಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಜಿ20 ದೇಶಗಳು ಎದುರಿಸುತ್ತಿರುವ ಸವಾಲುಗಳಿಗೆ ಸಮರ್ಪಕವಾದ ಪರಿಹಾರ ಒದಗಿಸಲು ಕೆಲಸ ಮಾಡುತ್ತಿರುವವರೂ ಈ ಸಂದರ್ಭದಲ್ಲಿ ಬರಲಿದ್ದಾರೆ.

ಜಿ20 ದೇಶಗಳ್ಯಾವುವು?

ವಿಶ್ವದಲ್ಲಿ ವಿವಿಧ ದೇಶಗಳ ವಿವಿಧ ಗುಂಪುಗಳಿವೆ. ಅದರಲ್ಲಿ ಜಿ20ಯೂ ಒಂದು. ಇದರಲ್ಲಿ ಭಾರತವಲ್ಲದೇ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ಸೌತ್ ಆಫ್ರಿಕಾ, ಸೌತ್ ಕೊರಿಯಾ, ಟರ್ಕಿ, ಬ್ರಿಟನ್ ಮತ್ತು ಅಮೆರಿಕ ದೇಶಗಳಿವೆ.

ಭಾರತದ ಅಧ್ಯಕ್ಷತೆ

ಕಳೆದ ಬಾರಿಯ ಜಿ20 ಶೃಂಗಸಭೆಯ ಅಧ್ಯಕ್ಷತೆ ಚೀನಾದಲ್ಲಿ ಆಗಿತ್ತು. ಈ ಬಾರಿ ಭಾರತಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. 2023 ಸೆಪ್ಟೆಂಬರ್ 9-10ರಂದು ದೆಹಲಿಯಲ್ಲಿ ಶೃಂಗಸಭೆ ನಡೆಯಲಿದೆ. ಅದಕ್ಕೂ ಮುನ್ನ 200ಕ್ಕೂ ಹೆಚ್ಚು ಪೂರ್ವಭಾವಿ ಸಭೆಗಳು ದೇಶಾದ್ಯಂತ ಜರುಗಲಿವೆ. ಅದರ ಭಾಗವಾಗಿಯೇ ಬೆಂಗಳೂರಿನಲ್ಲಿ ಈ ತಿಂಗಳು ಎರಡು ಸಭೆಗಳು ನಡೆಯುತ್ತಿರುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!