ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಶ್ರೀರಾಮ ಸೇನೆ ವತಿಯಿಂದ ನವೆಂಬರ್ 5 ರಂದು ನಡೆಯಲಿರುವ ದತ್ತ ಮಾಲಾ ಅಭಿಯಾನದ ಅಂಗವಾಗಿ ಕಾನೂನು-ಸುವ್ಯಸ್ಥೆ ಕಾಪಾಡಿಕೊಳ್ಳುವ ಸಲುವಾಗಿ ಜಿಲ್ಲೆಯಾದ್ಯಂತ 49 ಮಂದಿ ಸೆಕ್ಟರ್ ಮ್ಯಾಜಿಸ್ಟ್ರೇಟರುಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ ಆಮಟೆ ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಕೋರಿಕೆ ಮೇರೆಗೆ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಸಿ.ಎನ್.ಮೀನಾ ನಾಗಾರಾಜ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.
ಎಲ್ಲಾ 49 ಸೆಕ್ಟರ್ ಮ್ಯಾಜಿಸ್ಟ್ರೇಟರ್‌ಗಳು ಕಾನೂನು ಮತ್ತು ಸುವ್ಯವಸ್ಥೆ ಸಂಬಂಧ ಪೊಲೀಸರ ಜೊತೆ ಸಮನ್ವಯ ಹಾಗೂ ಸಹಯೋಗದೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಒಟ್ಟು 26 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದು ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರು ಹಾಗೂ ದತ್ತ ಮಾಲಾಧಾರಿಗಳ ವಾಹನಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಬಂದೋಬಸ್ತ್ ಸಂಬಂಧ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಅಧಿಕಾರಿ ಸಿಬ್ಬಂದಿಯವರನ್ನು ನೇಮಿಸಿದ್ದು ಜೊತೆಗೆ ಕೆಎಸ್‌ಆರ್‌ಪಿ ಹಾಗೂ ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದನ್ವಯ ವಾಹನಗಳ ಚಲನವಲನಗಳನ್ನು ನಿರ್ಬಂಧಿಸಲಾಗಿದ್ದು, ನಗರದಲ್ಲಿ ಶೋಭಾ ಯಾತ್ರೆ ನಡೆಯುವ ನವೆಂಬರ್ 5 ರಂದು ಬೆಳಗ್ಗೆ 6 ರಿಂದ ಸಂಜೆ 5 ರ ವರೆಗೆ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗುವ ವಾಹನಗಳು ರತ್ನಗಿರಿ ರಸ್ತೆಯಲ್ಲಿ ಸಂಚರಿಸಬೇಕಾಗುತ್ತದೆ. ಎಂಜಿ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳು ಮಾರ್ಕೆಟ್ ರಸ್ತೆ ಮತ್ತು ಐಜಿ ರಸ್ತೆಗಳಲ್ಲಿ ಸಂಚರಿಸಬೇಕಾಗುತ್ತದೆ.
ನವೆಂಬರ್ 5 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ವರೆಗೆ ಶೋಭಾ ಯಾತ್ರೆ ನಡೆಯುವ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿ ಜೊತೆಗೆ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ. ನವೆಂಬರ್ 5 ರಂದು ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯಲ್ಲಿ ಸಂಚರಿಸುವ ಭಾರಿ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಚಿಕ್ಕಮಗಳೂರು ನಗರ, ದತ್ತಪೀಠ, ಸುತ್ತಮುತ್ತಲಿನ ಸೂಕ್ಷ್ಮ ಸ್ಥಳಗಳು ಹಾಗೂ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಜನರು ಹಾಗೂ ವಾಹನಗಳ ಚಲನ ವಲನಗಳ ಮೇಲೆ ನಿಗಾ ವಹಿಸಲಾಗಿದೆ. ಅಲ್ಲದೆ ಅಂತಹ ಸ್ಥಳಗಳಲ್ಲಿ ವಿಡಿಯೋ ಗ್ರಾಫರ್ ಗಳು ಮತ್ತು ಡ್ರೋನ್ ಕ್ಯಾಮೆರಾ ಗಳನ್ನು ಬಳಸಿ ಕಣ್ಗಾವಲು ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 4 ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 6 ರ ಬೆಳಿಗ್ಗೆ 10 ಗಂಟೆಯವರೆಗೆ ಐಡಿ ಪೀಠ,ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ, ಗಾಳಿಕೆರೆ ಹಾಗೂ ಮಾಣಿಕ್ಯದಾರ ಈ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಐಡಿ ಪೀಠಕ್ಕೆ ತೆರಳುವ ಎಲ್ಲಾ ಉದ್ದನೆಯ ಚಾಸಿಸ್ ವುಳ್ಳ ವಾಹನಗಳ ಸಂಚಾರವನ್ನು ನಿಷೇಧಿಸಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.