ವಿಕ್ರಮ 75: ರಾಷ್ಟ್ರೀಯ ವ್ಯಾಖ್ಯಾನಗಳಿಗಿದು ಪೂರಕ ಕಾಲ ಎಂದರು ದತ್ತಾತ್ರೇಯ ಹೊಸಬಾಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

“ಸ್ವಾತಂತ್ರ್ಯಾನಂತರದ ಹಲವು ದಶಕಗಳವರೆಗೆ ಪತ್ರಿಕೆಗಳಲ್ಲಿ ಹಿಂದು ಹಾಗೂ ಭಾರತಕ್ಕೆ ಸಂಬಂಧಿಸಿದ ಆಖ್ಯಾನಗಳಿಗೆ ಜಾಗವೇ ಇರಲಿಲ್ಲ. ರಾಮಸ್ವರೂಪ್, ಸೀತಾರಾಂ ಗೋಯಲ್, ದತ್ತೋಪಂತ ತೇಂಗಡಿಯಂಥ ವ್ಯಾಖ್ಯಾನಕಾರರು ಇದ್ದರೂ ಅವರನ್ನೆಲ್ಲ ಮುಖ್ಯವಾಹಿನಿಯಿಂದ ದೂರ ಇಡಲಾಗಿತ್ತು. ಇಂಥದೇ ಅಪಮಾನದ-ಕಷ್ಟಕರ ದಿನಗಳಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಪ್ರಾರಂಭಿಸಿದ ಪತ್ರಿಕೆ ವಿಕ್ರಮ. ಇವತ್ತು ನಮ್ಮ ನರೇಟಿವ್’ಗಳಿಗೆ ಕಾಲ ಬಂದಿರುವ ಸಂದರ್ಭದಲ್ಲಿ ಪತ್ರಿಕೆ ಹೊಸ ಅವಕಾಶಗಳಿವೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ವಿಶ್ಲೇಷಿಸಿದರು.

ವಿಕ್ರಮ ವಾರಪತ್ರಿಕೆಯು ಸಾರ್ಥಕ 75 ವರ್ಷಗಳನ್ನು ಮುಗಿಸಿದ ಹೊತ್ತಿನಲ್ಲಿ ಬೆಂಗಳೂರಿನ ಆರ್ ವಿ ಟೀಚರ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ವಿಕ್ರಮವನ್ನು ಪ್ರಾರಂಭಿಕ ಹಂತದಲ್ಲಿ 40 ವರ್ಷಗಳ ಕಾಲ ಕಟ್ಟಿದ ಬೆಸುನಾ ಮಲ್ಯರನ್ನು ದತ್ತಾತ್ರೇಯ ಹೊಸಬಾಳೆಯವರು ವಿವರವಾಗಿ ನೆನಪಿಸಿಕೊಂಡರು. ಸಂಬಳ ಪಡೆಯುವುದು ಹಾಗಿರಲಿ, ತಮ್ಮದೇ ಉಳಿಕೆಯ ಹಣವನ್ನು ವಿಕ್ರಮದ ಅಂಚೆವೆಚ್ಚಕ್ಕಾಗಿ ಬಳಸಿದ ಸಂಪಾದಕ ಮಲ್ಯರನ್ನು ಬಿಟ್ಟರೆ ಯಾರು ಸಿಕ್ಕಾರು ಎಂದು ಮಲ್ಯರ ವ್ಯಕ್ತಿತ್ವ ಮತ್ತು ಬರವಣಿಗೆಗಳ ವಿವಿಧ ಮಜಲುಗಳನ್ನು ಪರಿಚಯಿಸಿದರು. ಮಲ್ಯರು ಹಿಂದುತ್ವ ಮತ್ತು ರಾಷ್ಟ್ರೀಯ ವಿಚಾರಗಳನ್ನು ಹಿಂಜರಿಕೆಯಿಲ್ಲದೇ ಪ್ರತಿಪಾದಿಸುತ್ತಿದ್ದಾಗಲೂ ಅವತ್ತಿನ ಎಲ್ಲ ರಾಜಕೀಯ, ಸಾಮಾಜಿಕ, ಧಾರ್ಮಿಕ ನಾಯಕತ್ವಗಳೊಂದಿಗೆ ಅವರ ಬೆರೆಯುವಿಕೆ ಇತ್ತು. ಇವರ ಪ್ರಾಮಾಣಿಕ ವ್ಯಕ್ತಿತ್ವವೇ ಅಂಥದೊಂದು ಗೌರವ ತಂದುಕೊಟ್ಟಿತ್ತು ಎಂದು ವಿಶ್ಲೇಷಿಸಿದರು.

ಆ ಕಾಲದ ನೆನಪುಗಳನ್ನು ತಮ್ಮ ಮಾತುಗಳಲ್ಲಿ ತಂದ ಹೊಸಬಾಳೆಯವರು, “ಆ ಕಾಲದ ದಿಗ್ಗಜರಾದ ತಿತಾ ಶರ್ಮ, ಎಚ್ಚೆನ್,ವಿ.ಸೀ., ಶಿವರಾಮ ಕಾರಂತ ಇವರೆಲ್ಲರೂ ವಿಕ್ರಮದ ವಿಜಯ ದಶಮಿ ಸಂಚಿಕೆಗೆ ಬರೆದಿದ್ದಾರೆ. ಹೆಚ್ಚಿನವರು ಗೌರವ ಸಂಭಾವನೆಯನ್ನೇ ನಿರಾಕರಿಸಿದರು. ಶಿವರಾಮ ಕಾರಂತರಿಗೆ ಅವರ ಬರಹಕ್ಕೆ ಚೆಕ್ ಕಳಿಸಿದ್ದಾಗ ಅವರು ಮಲ್ಯರಿಗೆ, ನಾನೇನು ವಿಕ್ರಮದ ಹೊರಗಿನವನು ಅಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದರಂತೆ” ಎಂದು ಮೆಲಕು ಹಾಕಿದರು.

ಸಂಘದ ಕಾರ್ಯಕರ್ತರು ಪ್ರಾರಂಭಿಸಿದ ವಿಕ್ರಮವನ್ನು ಸಮಾಜದ ಎಲ್ಲರೂ ಬೆಳೆಸಿದ್ದಾರೆ. ಸ್ವಯಮೇವ ಮೃಗೇಂದ್ರತಾ ಎಂಬ ಘೋಷವಾಕ್ಯಕ್ಕೆ ತಕ್ಕಂತೆ ಸ್ವತ್ತ್ವದ ಆಧಾರದ ಮೇಲೆ ವಿಕ್ರಮ ಬೆಳೆದಿದೆ. ರಾಷ್ಟ್ರೀಯತೆಯ ಪ್ರತಿಪಾದನೆ ಜತೆಗೆ ಭಾಷೆಗೂ ವಿಕ್ರಮ ಕೊಡುಗೆ ನೀಡಿದೆ. ಇಲ್ಲಿರುವುದು ದ್ವೇಷವಿಲ್ಲದ ಭಾಷೆ. ಖಂಡಿಸಬೇಕಾಗಿ ಬಂದಾಗಲೂ ವೈಯಕ್ತಿಕ ಕೆಸರೆರಚಾಟಕ್ಕೆ ವಿಕ್ರಮ ಯಾವತ್ತೂ ಇಳಿದಿಲ್ಲ ಎಂದು ವಿಶ್ಲೇಷಿಸಿದರು.

ಪತ್ರಿಕೆಗಳು ಇಂದು ಪ್ರಕಾಶಕರ ಪಾಲಿಗೆ ಉದ್ಯಮವಾಗಿದ್ದಿರಬಹುದು. ಆದರೆ ಸಂಪಾದಕನಾದವನಿಗೆ, ಪತ್ರಕರ್ತನಾದವನಿಗೆ ಅದರಲ್ಲೊಂದು ಧರ್ಮವಿದೆ. ಅದೇ ಸಮಾಜ ಹಿತ, ಎಲ್ಲ ವರ್ಗಗಳ ಜತೆ ಬೆಸುಗೆ ಹಾಗೂ ಅಧ್ಯಯನದ ವಿಸ್ತಾರ. ವಿಕ್ರಮವು ವೈಚಾರಿಕ ಆಂದೋಲನವನ್ನು ಇವತ್ತಿನ ಹೊಸ ತಂತ್ರಜ್ಞಾನ ಮತ್ತು ಸಾಧ್ಯತೆಗಳನ್ನು ಉಪಯೋಗಿಸಿಕೊಂಡು ಮುಂದುವರಿಸಬೇಕಿದೆ ಎಂದು ಅವರು ಹೇಳಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಿಥಿಕ್ ಸೊಸೈಟಿ ಗೌರವಾಧ್ಯಕ್ಷ ವಿ ನಾಗರಾಜ್ ವೇದಿಕೆಯಲ್ಲಿದ್ದರು. ವಿಕ್ರಮ ಸಂಪಾದಕ ರಮೇಶ ದೊಡ್ಡಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಆರೆಸ್ಸೆಸ್ ಸಹಸರಕಾರ್ಯವಾಹ ಮುಕುಂದ ಸಿ ಆರ್, ಕ್ಷೇತ್ರೀಯ ಸಂಘಚಾಲಕ ಸುಧೀರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಕ್ರಮದೊಂದಿಗೆ ಪ್ರಾರಂಭದಿಂದಲೂ ಇದ್ದು ಸಾವಿರಾರು ಲೇಖನಗಳನ್ನು ಭಾಷಾಂತರಿಸಿರುವ ರಮಾನಂದ ಆಚಾರ್ಯ ಸೇರಿದಂತೆ ಜಾಹೀರಾತು ಹಾಗೂ ಆಡಳಿತಾತ್ಮಕ ವಿಭಾಗಗಳಲ್ಲಿ ದಶಕಗಳಿಂದ ಸೇವೆ ಸಲ್ಲಿಸಿದ ಹಲವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!