September 1, 2026
Tuesday, September 1, 2026
spot_img

ಗುಟ್ಕಾ ನಿಷೇಧ, ಭದ್ರಾ ನೀರಿಗೆ ವಿರೋಧ: ದಾವಣಗೆರೆ ಬಂದ್‌ಗೆ ಭರ್ಜರಿ ಸ್ಪಂದನೆ

ಹೊಸದಿಗಂತ ವರದಿ ದಾವಣಗೆರೆ:

ಗುಟ್ಕಾ ನಿಷೇಧ ಹಾಗೂ ಭದ್ರಾ ಡ್ಯಾಂ ನಿಂದ ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆ ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಮತ್ತು ಅಡಿಕೆ ಬೆಳೆಗಾರರ ಒಕ್ಕೂಟದಿಂದ ಮಂಗಳವಾರ ಕರೆ ನೀಡಿದ್ದ ದಾವಣಗೆರೆ ನಗರ ಬಂದ್ ಬಹುತೇಕ ಯಶಸ್ವಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ನಗರದಲ್ಲೆಡೆ ಸುತ್ತಾಡಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಮುಂಜಾಗೃತಾ ಕ್ರಮವಾಗಿ ಬಂಧಿಸಿ, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು.

ಬಂದ್ ನಿಮಿತ್ತ ನಗರದ ಮಾರುಕಟ್ಟೆ ಪ್ರದೇಶ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಖಾಸಗಿ ಕಚೇರಿ, ವಾಣಿಜ್ಯ ಮಳಿಗೆ, ಆಭರಣ ಶೋರೂಮ್, ಬಟ್ಟೆ ಅಂಗಡಿ, ಹೋಟೆಲ್ ಸಹಿತ ಬಹುತೇಕ ಬಂದ್ ಆಗಿದ್ದರಿಂದ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಆಟೋ ರಿಕ್ಷಾ, ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್, ನಗರ ಸಾರಿಗೆ ಬಸ್ ಗಳು ಅಲ್ಲಲ್ಲಿ ಸಂಚರಿಸುತ್ತಿದ್ದುದು ಸಾಮಾನ್ಯವಾಗಿತ್ತು. ದಾವಣಗೆರೆ ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಮಾನಸಿಕವಾಗಿ ಸಿದ್ಧರಾಗಿದ್ದ ಜನ

ಔಷಧಿ ಅಂಗಡಿ, ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟು ಹೊರತುಪಡಿಸಿ, ಉಳಿದೆಲ್ಲ ಅಂಗಡಿಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸುತ್ತಾ ಸಾಗಿದರು. ಜನರೂ ಕೂಡ ಬಂದ್ ಗೆ ಮಾನಸಿಕವಾಗಿ ಸಿದ್ಧರಾಗಿದ್ದಾರೇನೋ ಎಂಬಂತೆ ಪ್ರಮುಖ ರಸ್ತೆಗಳು ಸ್ತಬ್ದವಾಗಿರುವುದು ಕಂಡುಬಂತು. ಸಣ್ಣಪುಟ್ಟ ಬೀದಿ ಅಂಗಡಿಗಳು ಕೂಡ ಬಾಗಿಲು ಹಾಕಿದ್ದವು. ರಸ್ತೆಗಳಲ್ಲಿ ಜನರ ಓಡಾಟವೂ ವಿರಳವಾಗಿತ್ತು. ಮಧ್ಯಾಹ್ನದ ನಂತರವಷ್ಟೇ ಪರಿಸ್ಥಿತಿ ಸಹಜಕ್ಕೆ ಮರಳಿತು.

ಇದನ್ನೂ ಓದಿ:

ಹಳೆ ಪಿ.ಬಿ ರಸ್ತೆಯ ರಿಲಯನ್ಸ್ ಸ್ಮಾರ್ಟ್ ಬಜಾರ್, ಅಕ್ಕ ಮಹಾದೇವಿ ರಸ್ತೆಯಲ್ಲಿನ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು. ಪಿ.ಜೆ ಬಡಾವಣೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುತ್ತಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇತರರನ್ನು ಪೊಲೀಸರು ತಡೆದ ವೇಳೆ ತೀವ್ರ ವಾಗ್ವಾದ, ಮಾತಿನ ಚಕಮಕಿ, ತಳ್ಳಾಟ ನಡೆಯಿತು.

50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಕೊನೆಗೆ ರೇಣುಕಾಚಾರ್ಯ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಸ್.ಜಗದೀಶ, ಚಂದ್ರಶೇಖರ ಪೂಜಾರ, ಬಿ.ಎಂ.ಸತೀಶ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದು, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು.

ಶಾಂತಿಯುತವಾಗಿ ಬಂದ್ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ರಾಜ್ಯ ಸರ್ಕಾರ ಪೊಲೀಸರನ್ನು ಬಿಟ್ಟು ದೌರ್ಜನ್ಯ ಎಸಗಿದೆ. ರೈತರ ಮೇಲೆ ಪೊಲೀಸರು ಮೃಗೀಯ ವರ್ತನೆ ತೋರಿದ್ದಾರೆ. ಪೊಲೀಸರು ರೈತ ಮುಖಂಡರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ವಿನಾಕಾರಣ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿರುವ ಅಧಿಕಾರಿಗಳ ಪಟ್ಟಿ ಮಾಡಿಕೊಂಡಿದ್ದೇವೆ. ಮುಂದೆ ನಮ್ಮ ಸರ್ಕಾರ ಬಂದಾಗ ಅಂತಹವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !