ಹೊಸದಿಗಂತ ವರದಿ ರಾಮನಗರ:
ರಾಜ್ಯದಲ್ಲಿ ಈ ವರುಷ ಮಳೆ ಇಲ್ಲ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಸುಣ್ಣದಂತೆ ಮಾಡದೇ ಒಟ್ಟಾರೆ ಎಲ್ಲಾ 224 ಕ್ಷೇತ್ರಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಕೂಡಲೇ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದರು.
ಇಲ್ಲಿನ ವಿಜಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಚ್.ಕೆ. ಪಾಟೀಲರು ರಾಜೀನಾಮೆ ನೀಡುತ್ತೇನೆ ಎಂದರೆ ಅವರ ತಾಲ್ಲೂಕು ಬರಪೀಡಿತ ಎಂದು ಘೋಷಣೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೇಸ್ ಸರ್ಕಾರದ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯದಲ್ಲಿ ಯಾವ ಭಾಗದಲ್ಲಿ ಸದೃಢವಾಗಿದೆ ಅಲ್ಲಿ ಕಾಂಗ್ರೆಸ್ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ. ಮಂಗಳೂರು ಕರಾವಳಿ ಪ್ರದೇಶ, ಉತ್ತರ ಕರ್ನಾಟಕ ಪ್ರದೇಶಗಳು ಬಿಜೆಪಿ ಭದ್ರಕೋಟೆಯಾಗಿದೆ. ಅಲ್ಲಿ ಹಣವೇ ಲಭ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಮರುಜೀವ ಕೊಟ್ಟಿರುವುದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕು. ಅಲ್ಲಿ ಬಿಜೆಪಿ ಸರ್ಕಾರವಿದ್ದಾಗ ಐದು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿತ್ತು ಎಂದರು.
ಸರ್ಕಾರದಿಂದ ಹಣವು ಬಿಡುಗಡೆಯಾಗಿ ಯೋಜನೆಯು ಪೂರ್ಣಗೊಂಡಿತು. ಆದರೆ ಇವರು ಐದು ವರುಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿದ್ದರು ಮತ್ತು ಎಂಟು ವರುಷ ಮುಖ್ಯಮಂತ್ರಿಯಾಗಿದ್ದರು ಒಂದು ರೂಪಾಯಿ ಬಿಡುಗಡೆ ಮಾಡಲಿಲ್ಲ ಎಂದರು.
ತಾವು ಮುಖ್ಯಮಂತ್ರಿಯಾಗಲು ಕಾರಣವಾದ ಬಾಗಲಕೋಟೆಗೆ ಹಣ ಮಂಜೂರು ಮಾಡಲಿಲ್ಲ ಎಂದ ಮೇಲೆ ಹೊಸದಾಗಿ ಘೋಷಣೆ ಮಾಡಿಕೊಂಡು ಹೋಗುತ್ತಿದ್ದು, ಯಾವುದೇ ಹಣ ಇವರಲ್ಲಿ ಇಲ್ಲ. ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಪ್ರತಿತಿಂಗಳು ಹಣ ಬಿಡುಗಡೆಯಾಗುತ್ತಿಲ್ಲ ಎಂದರು.
ಇದನ್ನೂ ಓದಿ:
ಪ್ರತಿ ಎರಡು, ಮೂರು, ಐದು ತಿಂಗಳಿಗೊಮ್ಮೆ ಹಣ ಬಿಡುಗಡೆಯಾಗುತ್ತಿದೆ. ಹಾಲಿಗೆ ನೀಡುತ್ತಿರುವ ಸಬ್ಬಿಡಿ ಹಣವೂ ಬಿಡುಗಡೆಯಾಗಿಲ್ಲ. ಹಳೆಯ ಭರವಸೆಗಳೇ ಅರ್ಧಕ್ಕೆ ನಿಂತುಹೋಗಿದ್ದು, ಹೊಸ ಆಶ್ವಾಸನೆಗಳನ್ನು ಘೋಷಣೆ ಮಾಡುವುದರಿಂದ ಯಾವುದೇ ಪ್ರಯೋಜನವು ಇಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ ಸರ್ಕಾರದ ಖಜಾನೆ ಖಾಲಿಯಾಗಿದ್ದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ತಿಳಿಸಿದರು.



