October 14, 2026
Wednesday, October 14, 2026
spot_img

ಹಗಲಲ್ಲೇ ಕಾಫಿ ತೋಟಕ್ಕೆ ಎಂಟ್ರಿ ಕೊಟ್ಟ ಕಾಡಾನೆಗಳು: ತೋಟದ ಕೆಲಸಕ್ಕೆ ತೆರಳಲು ಕಾರ್ಮಿಕರ ಹಿಂದೇಟು

ಹೊಸದಿಗಂತ ವರದಿ ಹಾಸನ:

ಬೇಲೂರು ತಾಲೂಕು ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಮಳವಳ್ಳಿ ಎಸ್ಟೇಟ್ ಸಮೀಪದ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿರುವುದು ರೈತರು ಹಾಗೂ ಕೂಲಿ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.

ಮಳವಳ್ಳಿ ಎಸ್ಟೇಟ್ ಬಳಿಯ ಬೇಲೂರು ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಸತೀಶ್ ಹಾಗೂ ಭುವನೇಶಯ್ಯನವರಿಗೆ ಸೇರಿದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ನಿರಂತರವಾಗಿ ಸಂಚರಿಸುತ್ತಿದ್ದು, ಹಗಲು ವೇಳೆಯಲ್ಲಿಯೇ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನಲಾಗಿದೆ. ಇದರಿಂದ ತೋಟದ ಕೆಲಸಗಳಿಗೆ ತೆರಳುವ ಕೂಲಿ ಕಾರ್ಮಿಕರು ಜೀವಭಯದಿಂದ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಒಂಟಿಯಾಗಿ ತೋಟದೊಳಗೆ ತೆರಳಲು ಭಯಪಡುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿಯೂ ಆನೆಗಳು ತೋಟಗಳಲ್ಲೇ ಕಾಣಿಸಿಕೊಳ್ಳುತ್ತಿರುವುದರಿಂದ ಯಾವ ಸಂದರ್ಭದಲ್ಲಿ ದಾಳಿ ನಡೆಸಬಹುದು ಎಂಬ ಆತಂಕ ಕಾರ್ಮಿಕರು ಹಾಗೂ ಸ್ಥಳೀಯರನ್ನು ಕಾಡುತ್ತಿದೆ.

ಇದೇ ವೇಳೆ ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಫಿ, ಬಾಳೆ, ಅಡಿಕೆ, ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗುತ್ತಿರುವ ಬಗ್ಗೆ ರೈತರು ಅಳಲು ತೋಡಿಕೊಂಡಿದ್ದಾರೆ. ಕಾಡಾನೆಗಳು ತೋಟಗಳಲ್ಲೇ ಬೀಡುಬಿಟ್ಟಿರುವುದರಿಂದ ಕೃಷಿ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಇದನ್ನೂ ಓದಿ:

ಕಾಡಾನೆಗಳ ನಿರಂತರ ಸಂಚಾರದಿಂದ ರೈತರು ಹಾಗೂ ಕಾರ್ಮಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ತೋಟಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಆನೆಗಳು ಎದುರಾದರೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಕಾರ್ಮಿಕರು ತೀವ್ರ ಎಚ್ಚರಿಕೆಯಿಂದ ಓಡಾಡುವಂತಾಗಿದೆ.

ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಡಾನೆಗಳ ಚಲನವಲನದ ಬಗ್ಗೆ ನಿಗಾ ವಹಿಸಬೇಕು. ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿನತ್ತ ಓಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ರೈತರು ಮತ್ತು ಕೂಲಿ ಕಾರ್ಮಿಕರ ಸುರಕ್ಷತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾಡಾನೆಗಳ ಹಾವಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣವೇ ಕಾರ್ಯಾಚರಣೆ ಕೈಗೊಂಡು, ಜನವಸತಿ ಹಾಗೂ ಕೃಷಿ ಪ್ರದೇಶಗಳಿಂದ ಆನೆಗಳನ್ನು ಸುರಕ್ಷಿತವಾಗಿ ಕಾಡಿನತ್ತ ಸ್ಥಳಾಂತರಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

Must Read