ದಕ್ಷಿಣ ಕೊಡಗಿನಲ್ಲಿ ಕಾಡಾನೆ ಸಾವು

ಹೊಸದಿಗಂತ ವರದಿ,ಮಡಿಕೇರಿ:

ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ದಕ್ಷಿಣ ಕೊಡಗಿನ ಪರಕಟಗೇರಿಯಲ್ಲಿ ನಡೆದಿದೆ.
ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮದ ಪಂಚಾಯತಿ ವ್ಯಾಪ್ತಿಯ ಪರಕಟಕೇರಿ ಗ್ರಾಮದ ತೋಟದ ನಡುವೆ ಇರುವ ಕಚ್ಚಾ ರಸ್ತೆಯಲ್ಲಿ ಹೆಣ್ಣು ಕಾಡಾನೆಯ ಮೃತದೇಹ ಸೋಮವಾರ ಕಂಡುಬಂದಿದ್ದು, ವಯಸ್ಸಾಗಿ ಸ್ವಾಭಾವಿಕವಾಗಿ ಆನೆ ಸಾವಿಗೀಡಾಗಿದೆ ಎಂದು ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ತಿಳಿಸಿದ್ದಾರೆ.
ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯಿಂದ ಪರಕಟಕೇರಿ ಗ್ರಾಮಕ್ಕೆ ಕಾಡಾನೆ ಬಂದಿದ್ದು, ನಿತ್ರಾಣಗೊಂಡ ಹೆಣ್ಣಾನೆ ದಾರಿ ಮಧ್ಯೆ ಕುಸಿದು ಬಿದ್ದು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.
ಹುಲಿ ಹೆಜ್ಜೆ ಪತ್ತೆ: ಮತ್ತೊಂದೆಡೆ ಗೋಣಿಕೊಪ್ಪ ಸಮೀಪದ ಅತ್ತೂರು ಗ್ರಾಮದ ಗದ್ದೆ ಮನೆ ಸಮೀಪ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗ್ರಾಮದ ಪ್ಲಾಮ್ ವ್ಯಾಲಿ ರೆಸಾರ್ಟ್ ಹಾಗೂ ದುರ್ಗಾಪರಮೇಶ್ವರಿ ದೇವಾಲಯ ಸಮೀಪ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಕುಪ್ಪಂಡ ಮುತ್ತಪ್ಪ ಎಂಬವರ ತೋಟದಲ್ಲೂ ಹುಲಿಯ ಹೆಜ್ಜೆ ಗುರುತು ಕಂಡು ಬಂದಿದೆ. ಅರಣ್ಯ ಇಲಾಖೆಯೂ ಈ ಹೆಜ್ಜೆ ಗುರುತು ಹುಲಿಯದ್ದೇ ಎಂದು ದೃಢೀಕರಿಸಿದೆ. ಅತ್ತೂರು, ಗದ್ದೆಮನೆ ಭಾಗದ ಜನತೆ ಜಾಗರೂಕರಾಗಿರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಈಗಾಗಲೇ ಹುಲಿ ದಾಳಿಗೆ ಒಂದನೇ ರುದ್ರಗುಪ್ಪೆ ಗ್ರಾಮದಲ್ಲಿ ಗದ್ದೆಮನೆ ನಿವಾಸಿಯೊಬ್ಬರು ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!