ಕ್ರೈಸ್ ಖಾಲಿ ಹುದ್ದೆಗಳ ಭರ್ತಿಗೆ ನಿರ್ಧಾರ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಇನ್ನೆರಡು ತಿಂಗಳಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಖಾಯಂ ಶಿಕ್ಷಕರ ಮುಂಬಡ್ತಿ, ಖಾಲಿ ಇರುವ ಪ್ರಾಂಶುಪಾಲರು, ವಿವಿಧ ವಿಷಯ ಶಿಕ್ಷಕರು, ಸ್ಟಾಫ್ ನರ್ಸ್, ಅಡುಗೆಯವರು, ಕಾವಲುಗಾರರ ಸಹಿತ ವಿವಿಧ ಹುದ್ದೆಗಳ ಭರ್ತಿ ಮತ್ತು ನೇಮಕಾತಿ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಕ್ರೈಸ್ ಅಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ತಮ್ಮ ಅಧ್ಯಕ್ಷತೆಯಲ್ಲಿ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ನಡೆದ ವಸತಿ ಶಾಲಾ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಗೆ ಸಂಬಂಧಿಸಿದ ಸಭೆಯಲ್ಲಿ ಸಚಿವರು ಶಾಸಕರನೇಕರ ಕೋರಿಕೆಗಳಿಗೆ ಉತ್ತರಿಸಿದರು.

490 ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಕ್ರಮ:
ಈ ಹಿಂದೆ ಸಂಘದ ಖಾಯಂ ಶಿಕ್ಷಕರನ್ನು ಪ್ರಾಂಶುಪಾಲರ ಹುದ್ದೆಗೆ ಶೇ. 50:50 (ಬಡ್ತಿ:ನೇರ ನೇಮಕಾತಿ) ಅನುಪಾತದಲ್ಲಿ ಭರ್ತಿ ಮಾಡಲಾಗುತ್ತಿತ್ತು. ಅದನ್ನು ಇನ್ನು ಮುಂದೆ ಶೇ. 75:25 ಅನುಪಾತದಲ್ಲಿ ಭರ್ತಿ ಮಾಡಲಾಗುತ್ತದೆ. ಕ್ರೈಸ್‌ನ ಒಟ್ಟು 783 ಸಂಸ್ಥೆಗಳಲ್ಲಿ 307 ಪ್ರಾಂಶುಪಾಲರು ಖಾಯಂ ಆಗಿ ಇದ್ದಾರೆ. ಇನ್ನೂ 490 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಮುಂದಿನ ಎರಡು ತಿಂಗಳಲ್ಲಿ ನಿಯಮಗಳಾನುಸಾರ ಮುಂಬಡ್ತಿ ಮತ್ತು ನೇಮಕಾತಿ ಮಾಡಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸರಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಕೆಗೆ ನಿರ್ಧಾರ:
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾಗಾಂಧಿ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಜವಾಹರ ನವೋದಯ ಮಾದರಿಯ ವಸತಿ ಶಾಲೆಗಳಂತೆ ಅಭಿವೃದ್ಧಿಪಡಿಸುವುದು ಸರಕಾರದ ಗುರಿ. ಈ ಹಿನ್ನೆಲೆಯಲ್ಲಿ ಜವಾಹರ ನವೋದಯ ವಸತಿ ಶಾಲೆಗಳು, ಸರಕಾರಿ ನೌಕರರು ಮತ್ತು ಸಂಘದ ಖಾಯಂ ಸಿಬ್ಬಂದಿಗೆ ಇರುವ ಸೌಲಭ್ಯ, ಸವಲತ್ತುಗಳ ಬಗ್ಗೆ ಪರಿಶೀಲನೆ ಮಾಡಿ, ಸಂಘದ ಖಾಯಂ ಸಿಬ್ಬಂದಿಗೆ ವಿವಿಧ ಸೌಲಭ್ಯಗಳನ್ನು ವಿಸ್ತರಿಸಲು ಸರಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದರು.

ವಿಷಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ:
ಸಂಘದ ವಸತಿ ಶಾಲೆಗಳಲ್ಲಿನ ಹುದ್ದೆಗಳ ನೇರ ನೇಮಕಾತಿ ಸಂಬಂಧ, ಕರ್ನಾಟಕ ಲೋಕಸೇವಾ ಆಯೋಗದಿಂದ ಸಮಾಜ ವಿಜ್ಞಾನ ಶಿಕ್ಷಕರ 239 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 185 ಅಭ್ಯರ್ಥಿಗಳಿಗೆ ಮಾರ್ಚ್ 3 ರಂದು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. ಹಿಂದಿ ಶಿಕ್ಷಕರ 191 ಹುದ್ದೆಗಳ ನೇರ ನೇಮಕಾತಿಗೆ 181 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಇವರಲ್ಲಿ 20 ಮಂದಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದರಿಂದ 20 ಹುದ್ದೆಗಳನ್ನು ಕಾಯ್ದಿರಿಸಿ, ಇತರೆ 171 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಸಚಿವರು ವಿವರಿಸಿದರು.

ಸಮಸ್ಯೆಗಳ ಪರಿಹಾರಕ್ಕೆ ಸಚಿವರಿಂದ ಭರವಸೆ:
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವನ್ನು ಕರ್ನಾಟಕ ವಸತಿ ಶಿಕ್ಷಣ ನಿರ್ದೇಶನಾಲಯವನ್ನಾಗಿ ಮಾರ್ಪಡಿಸುವ ಕುರಿತು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ಶಾಲೆಗಳ ಖಾಯಂ ಸಿಬ್ಬಂದಿಗೆ ಮೂಲವೇತನದ ಶೇ. 10 ವಿಶೇಷ ಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ ಸರಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು. ಇದಲ್ಲದೇ ಕ್ರೈಸ್ ಸಿಬ್ಬಂದಿಯ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿ ಶಾಸಕರ ಕೋರಿಕೆಗಳಿಗೆ ಸ್ಪಂದಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ನಿವಾರಣೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ವೈ.ಎ. ನಾರಾಯಣ ಸ್ವಾಮಿ,
ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಅ. ದೇವೇಗೌಡ, ಚಿದಾನಂದ ಗೌಡ, ಎಸ್.ಎಲ್. ಭೋಜೇಗೌಡ, ಸುಶೀಲ್ ನಮೋಶಿ, ಎಸ್.ಪಿ. ಸಂಕನೂರು, ಅರುಣ್ ಶಹಾಪೂರ್, ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರ ನಿವೃತ್ತ ಐಎಎಸ್ ಅಧಿಕಾರಿ ವೆಂಕಟಯ್ಯ, ಕ್ರೈಸ್ ಇ.ಡಿ. ರಮೇಶ್ ದೇಸಾಯಿ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!