ದೀನ್‌ ದಯಾಳ್‌ ಉಪಾಧ್ಯಾಯರ ಕನಸು ಈಗ ನನಸಾಗುತ್ತಿದೆ: ಬಿಜೆಪಿ ಮಾಧ್ಯಮ ವಕ್ತಾರ ಸಿ.ಟಿ. ಮಂಜುನಾಥ್

ಹೊಸದಿಗಂತ ವರದಿ ಮಂಡ್ಯ :

ಧೀನ್‌ದಯಾಳ್ ಉಪಾಧ್ಯಾಯರು ಕಂಡಿದ್ದ ಅಖಂಡ ಭಾರತದ ಕನಸು ಇಂದು ನನಸಾಗುತ್ತಿದೆ. ಕಾಶ್ಮೀರ, ರಾಷ್ಟ್ರೀಯ ಶಿಕ್ಷಣ ನೀತಿ, ಮೇಕ್ ಇಂಡಿಯಾ, ಸ್ವಚ್ಚ ಭಾರತ ಇವೆಲ್ಲವೂ ಅವರ ಕಸನಾಗಿದ್ದವು ಎಂದು ಬಿಜೆಪಿ ಮಾಧ್ಯಮ ವಕ್ತಾರ ಸಿ.ಟಿ. ಮಂಜುನಾಥ್ ಬಣ್ಣಿಸಿದರು.
ಬಿಜೆಪಿ ಬೂತ್ ಮಟ್ಟದಲ್ಲಿ ನಡೆದ ಧೀನ್ ದಯಾಳ್ ಉಪಾಧ್ಯಯರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿಯವರು ಧೀನ್‌ದಯಾಳ್ ಉಪಾಧ್ಯಯರು ಕಂಡಿದ್ದ ಮುನ್ನೋಟದ ಹಾದಿಯಲ್ಲೇ ಸಾಗುತ್ತಾ ಭಾರತವನ್ನು ವಿಶ್ವಮಾನ್ಯವಾಗಿಸುತ್ತಿದ್ದಾರೆ ಎಂದು ಹೇಳಿದರು.

ಪರಂಪರೆಯ ಬೇರಿನೊಂದಿಗೆ ಆಧುನಿಕತೆಯ ತೇರು ಎಳೆಯುವ ಸಂಕಲ್ಪ ಅವರದ್ದಾಗಿತ್ತು. ಪಾಶ್ಚಿಮಾತ್ಯ ಚಿಂತನೆಯು ಕೇವಲ ಜ್ಞಾನೇಂದ್ರಿಯಗಳ ಗ್ರಹಿಕೆಯನ್ನಷ್ಟೇ ಆಧರಿಸಿದ್ದಾಗಿದೆ. ಆದರೆ, ಭಾರತೀಯ ದರ್ಶನ ಇವುಗಳ ಜೊತೆಗೆ ಪ್ರಜ್ಞೆ ಎಂಬುದನ್ನೂ ಒಳಗೊಂಡಿದೆ. ಹೀಗಾಗಿ ಪಾಶ್ಚಿಮಾತ್ಯ ತತ್ವ ಕೇವಲ ಭೌತಿಕವಾದಿಯಾಗಿದ್ದರೆ, ಭಾರತೀಯ ಚಿಂತನೆ ಅದನ್ನು ಮೀರಿದ್ದಾಗಿದೆ. ಅದು ಬದುಕಿನ ನಿರಂತರ ಹರಿವಿಗೆ ಇಂಪು ನೀಡಿದಂತಾಗಿದೆ ಎಂದು ಹೇಳಿದರು.
ಧೀನದಯಾಳರ ಜೀವನ ದೃಷ್ಠಿ ವಿಚ್ಚಿದ್ರಕಾರಿಯಾಗಿರಲಿಲ್ಲ. ಬದಲಾಗಿ ವೃಷ್ಠಿ-ಸಮಷ್ಠಿ-ಪರಮೇಷ್ಠಿ ಪ್ರಜ್ಞೆಯಿಂದ ಕೂಡಿದ ಬದುಕು ಅವರದ್ದಾಗಿತ್ತು. ಯಾವುದು ಸಮರ್ಥವೋ ಅದು ಬದುಕುಳಿಯುತ್ತದೆ ಎಂಬುದನ್ನು ಅವರು ಮನಗಂಡಿದ್ದರು. ಭಾರತೀಯ ಋಷಿಮುನಿಗಳ ಜೀವನದರ್ಶನದಂತೆ ವ್ಯಕ್ತಿಯ ಆಂತರಿಕ ವಿಕಾಸಕ್ಕೆ ಪೂರಕ ಎಂಬುದನ್ನು ಮನಗಂಡವರಾಗಿದ್ದರು. ಎಲ್ಲವನ್ನೂ ಒಂದಕ್ಕೊಂದು ಐಕ್ಯವಾಗುವ ಸಮನ್ವಯ ಮಾರ್ಗ ಅವರದ್ದು. ಆಧ್ಯಾತ್ಮಿಕ-ಲೌಕಿಕತೆ, ಪರಂಪರೆ, ಆಧುನಿಕತೆ ಇವುಗಳ ಮಿಳಿತ ಏನೆಂಬುದನ್ನು ಗ್ರಹಿಸಿದ್ದ ವ್ಯಕ್ತಿತ್ವ ಅವರದ್ದು ಎಂದು ಬಣ್ಣಿಸಿದರು.

ಭಾರತೀಯ ಸಂಸ್ಕೃತಿ ಕೋಮುವಾದಿಯಾದುದಲ್ಲ. ಅದು ಒಂದು ಪುಸ್ತಕ ಅಥವಾ ವ್ಯಕ್ತಿಯನ್ನು ಅಂತಿಮ ಪ್ರಮಾಣವೆಂದು ಒಪ್ಪುವುದಿಲ್ಲ. ವಿಚಾರ-ವಿಮರ್ಶೆಯ ಮೂಲಕ ತತ್ವದ ಅರಿವು ಎಂಬ ನಿಲುವು ಅವರದ್ದಾಗಿತ್ತು. ಹೀಗಾಗಿ ಭಾರತೀಯ ಪರಂಪರೆ ಎಂದರೆ ಉಪನಿಷತ್ತುಗಳು ಮತ್ತು ತತ್ವಶಾಸದ ಪರಂಪರೆಯೇ ಆಗಿದೆ ಎಂದು ಪ್ರಚುರಪಡಿಸಿದ್ದರು ಎಂದು ವಿವರಿಸಿದರು.

ಉತ್ತರ ಪ್ರದೇಶದ ಮಥುರಾ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿದ ಉಪಾಧ್ಯಾಯರು ರಾಜಕೀಯದಲ್ಲಿ ಸಂಸ್ಕೃತಿಯ ರಾಯಭಾರಿಯಾಗಿದ್ದರು. ಚಿಕ್ಕಂದಿನಲ್ಲೇ ತಂದೆ, ತಾಯಿ, ಒಡ ಹುಟ್ಟಿದವರನು ಕಳೆದುಕೊಂಡು ಕಷ್ಟದ ದಿನಗಳನ್ನು ಸವೆಸಿ ಬೆಳೆದಿದ್ದರು. ಅದು ಅವರ ಕಾರ್ಯಸಾಧುವಿಗೆ ಪ್ರಾಯೋಗಿಕ ನೆಲೆಯ ಚಿಂತನೆಗಳಾಗಿದ್ದವು. ಬದುಕಿದ್ದು ಕೇವಲ 52 ವರ್ಷವಾದರೂ, ಅಖಂಡ ಪರಿಕಲ್ಪನೆಯ ಬಗ್ಗೆ ಬೆಳಕು ಚೆಲ್ಲುತ್ತಲೇ ವಿಶ್ಮಾತ್ಮಕ ದೃಷ್ಠಿ ಪಸರಿ ಎಲ್ಲ ಮೈ ಮನಗಳಲ್ಲಿ ಬೆಸೆದು ಬೆಳಗುತ್ತಲೇ ಇದ್ದಾರೆ ಎಂದು ಸ್ಮರಿಸಿದರು.

ಬಿಜೆಪಿ ಮುಖಂಡರಾದ ಹೊಸಹಳ್ಳಿ ಶಿವು, ಚಿಕ್ಕೇಗೌಡ, ಮಹೇಶ, ರವಿ, ಸುರೇಶ, ರಾಜಮ್ಮ ಇತರರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!