ಜಲಜೀವನ ಮಿಷನ್ ಅಡಿಯಲ್ಲಿ ಕಾಮಗಾರಿ ಜಾರಿಗೆ ವಿಳಂಬ: ಸಚಿವ ಈಶ್ವರಪ್ಪ ಅಸಮಧಾನ

ಹೊಸದಿಗಂತ ವರದಿ, ಯಾದಗಿರಿ:

ಜಿಲ್ಲೆಯಲ್ಲಿ ಮಹತ್ವಪೂರ್ಣ ಜಲಜೀವನ ಮಿಷನ್ ಯೋಜನೆಯ ಜಾರಿಗೆ ವಿಳಂಬವಾಗುತ್ತಿದೆ. ಕೈಗೆತ್ತಿಕೊಳ್ಳಬೇಕಾಗಿರುವ ಹಾಗೂ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಏಪ್ರೀಲ್ ಕೊನೆಯ ವಾರದೊಳಗೆ ಮಗಿಸಬೇಕು ಎಂದು ಗ್ರಾಮೀಣ ಅಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವರಾದ ಕೆ.ಎಸ್.‌ಈಶ್ವರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರಗತಿ ಪರಿಶೀಲಬೆ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಮೊದಲನೆಯ ಹಂತದಲ್ಲಿ ಒಟ್ಟು 131 ಕಾಮಗಾರಿಗಳಿದ್ದು 45 ಕಾಮಗಾರಿಗಳು ಮುಗಿದಿದ್ದು 86 ಕಾಮಗಾರಿಗಳು ಬಾಕಿ ಇವೆ. ಎರಡನೆಯ ಹಂತದಲ್ಲಿ 202 ಕಾಮಗಾರಿಗಳಿದ್ದು 180 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, 57 ಕಾಮಗಾರಿಗಳಿಗೆ ಕೆಲಸದ ಆದೇಶ ನೀಡಲಾಗಿದೆ ಹಾಗೂ 4 ಕಾಮಗಾರಿಗಳು ಮುಗಿದಿದ್ದು, 53 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ ಮೂರನೆಯ ಹಂತದಲ್ಲಿ369 ಕಾಮಗಾರಿಗಳು ಇದ್ದು, 152 ಕಾಮಗಾರಿಗಾರಿಗಳಿಗೆ ಡಿ.ಪಿ.ಆರ್ ತಯಾರಿಸಲಾಗಿದೆ ಇನ್ನೂ 217 ಕಾಮಗಾರಿಗಳ ಡಿಪಿಆರ್ ತಯಾರಿಬೇಕಿದೆ. ಹೀಗೆ ಜಿಲ್ಲೆಗೆ ಒಟ್ಟು 55,511.02 ಲಕ್ಷ ಅನುದಾನ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅವಶ್ಯಕತೆ ಇರುತ್ತದೆ. ಅಗತ್ಯತೆ ಅರಿತುಕೊಂಡು ಎಲ್ಲ ಕಾಮಗಾರಿಗಳು ತ್ವರಿತಗತಿಯಲ್ಲಿ ಮುಗಿಸಬೇಕಿದ್ದು, ಮೊದಲನೆಯ ಹಾಗೂ ಎರಡನೆಯ ಹಂತದ ಕಾಮಗಾರಿಗಳಿಗೆ ಒಬ್ಬರೇ ಗುತ್ತಿಗೆದಾರರಿದ್ದರೆ ಅವರಿಗೆ ಎರಡು ತಂಡಗಳಲ್ಲಿ ಕಾಮಗಾರಿಗೆ ತೊಡಗಿಸಿಕೊಂಡು ಏಪ್ರೀಲ್ ಕೊನೆಯವಾರದೊಳಗೆ ಮುಗಿಸಬೇಕು. ನಾನು ಮೇ ತಿಂಗಳ ಮೊದಲ ವಾರದಲ್ಲಿ ಮತ್ತೆ ಬರುತ್ತೇನೆ ಆಗಲೂ ಕಾಮಗಾರಿಗಳು ಮುಗಿಯದಿದ್ದರೆ ನಾನು ಮಾತನಾಡುವ ಶೈಲಿಯೇ ಬದಲಾಗಿರುತ್ತದೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರ ಈ ಯೋಜನೆಗೆ ಸಾಕಷ್ಟು ಅನುದಾನ ಒದಗಿಸಿದೆ. ಈಗಾಗಲೇ ಮುಗಿದ ಕಾಮಗಾರಿಗಳ ಲೆಕ್ಕ ನೋಡಿದರೂ ಕೂಡಾ ಅಂಕಿಸಂಖ್ಯೆಗಳ ಅನುಗುಣವಾಗಿ ನೀರು ಒದಗಿಸಿಲ್ಲ.ಜನರಿಗೆ ಕುಡಿಯಲು ನೀರು ಕೊಡದ ನಿಮಗೆ ನಾಚಿಕೆಯಾಗಬೇಕು ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದ ಸಚಿವರು ನಾಳೆಯಿಂದಲೇ ತಾಪಂ ಇಓ, ಎ.ಇ.ಇ.ಹಾಗೂ ಪಿ.ಡಿ.ಓಗಳು ಒಟ್ಟಾಗಿ ಹೋಗಿ ಗ್ರಾಮೀಣ ಭಾಗದ ವಸ್ತುಸ್ಥಿತಿಯನ್ನು ಅರಿತು ಜಲಜೀವನ ಮಿಷನ್ ಯೋಜನೆಯ ಅಡಿಯಲ್ಲಿ ಮನೆಗಳಿಗೆ ನೀರು ಒದಗಿಸಬೇಕು ಎಂದು ಕಟ್ಟೆಚ್ಚರ ನೀಡಿದರು.

ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ, ಆದರೂ ಕೂಡಾ ಜನರು ಇನ್ನೂ ಶೌಚಾಲಯಕ್ಕೆ ಬಯಲು ಪ್ರದೇಶಕ್ಕೆ ಯಾಕೆ ಹೋಗುತ್ತಿದ್ದಾರೆ? ನನಗೆ ತಿಳಿಯುತ್ತಿಲ್ಲ ಈ ಬಗ್ಗೆ ಯಾರಿಗಾದರೂ ಗೊತ್ತಿದೆಯಾ? ಎಂದು ಸಚಿವರು ಅಧಿಕಾರಿಗಳಿಗೆ ಹಾಗೂ ಗ್ರಾಮಪಂಚಾಯತ ಅಧ್ಯಕ್ಷರಿಗೆ ಕೇಳಿದರು. ಯಾರಿಂದಲೂ ಸಮರ್ಪಕ ಉತ್ತರ ಬರಲಿಲ್ಲ. ಆಗ ಉತ್ತರಿಸಿದ ಸಚಿವರೇ, ನಾನು ಮೊದಲ ಬಾರಿಗೆ ಇದೇ ವಿಚಾರದಲ್ಲಿ ಸರ್ಕಾರಕ್ಕೆ ಬೈದಿದ್ದೆ, ಈಗ ನಾನೇ ಬೈಸಿಕೊಳ್ಳಬೇಕಾಗಿದೆ ಎಂದು ಮೆಲುಕು ಹಾಕಿದರು.

ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಪಿಡಿಓಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್ ದೂರಿದರೆ ನಾವು ಕಾಲ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎಂದು ಶಾಸಕರಾದ ಮಾಜಿ ಸಚಿವರ ಬಾಬುರಾವ ಚಿಂಚನಸೂರು ಅವರು ಸಚಿವರಿಗೆ ದೂರು ನೀಡಿದರು. ಆಗ ಮಧ್ಯೆ ಪ್ರವೇಶಿಸಿದ ಸಚಿವರು, ಅಧಿಕಾರಿಗಳಿಗೆ ಸೂಚನೆ ನೀಡಿ ಜನಪ್ರತಿನಿಧಿಗಳ ಸಲಹೆ ಸೂಚನೆ ಪಡೆದುಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 415 ಶುದ್ದ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ 190 ರಿಪೇರಿಗೆ ಬಂದಿವೆ ಎಂದು ಅಧಿಕಾರಿಗಳು ಸಚಿವರಿಗೆ ಹೇಳಿದರು. ರಿಪೇರಿಗೆ ಬಂದಿರುವ ಘಟಕಗಳನ್ನು ರಿಪೇರಿ ಮಾಡಿ ಅವುಗಳ ನಿರ್ವಹಣೆಯನ್ನು ಏಜೆನ್ಸಿಗೆ ವಹಿಸುವ ಬದಲು ಪಂಚಾಯತ ಕಡೆಯಿಂದ ನಿರ್ವಹಿಸಬೇಕು ಎಂದರು ಸಚಿವರು ಸೂಚಿಸಿದರು.
.

ವೇದಿಕೆಯ ಮೇಲೆ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ಮಾಜಿ ಸಚಿವರಾದ ಬಾಬುರಾವ ಚಿಂಚನಸೂರು, ಆರ್ ಡಿ ಪಿಆರ್ ಕಮೀಷನರ್ ಶಿಲ್ಪಾ ಶರ್ಮ, ಬಸವರಾಜ್ ಚಂಡ್ರಿಕಿ ಹಾಗೂ‌ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!