ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ 20 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
70 ವಿಧಾನಸಭಾ ಕ್ಷೇತ್ರಗಳಿಗೆ 2025ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು, ಇಂದು (ಡಿ.9) ಆಮ್ ಆದ್ಮಿ ಪಕ್ಷ 20 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದಕ್ಕೂ ಮುಂಚೆ ನ.21 ರಂದು 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.
ಮಾಜಿ ಡಿಸಿಎಂ ಹಾಗೂ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರು ದೆಹಲಿಯ ಪಟ್ಪರ್‌ಗಂಜ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಈ ಬಾರಿ ಜಂಗ್‌ಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ಎಎಪಿ ಸೇರ್ಪಡೆಗೊಂಡಿದ್ದ ಅವಧ್ ಓಜಾ ಪಟ್ಪರ್‌ಗಂಜ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಶಹದಾರದಿಂದ ಕ್ಷೇತ್ರದಿಂದ ಜಿಂಟೆಂಡರ್ ಸಿಂಗ್ ಶುಂಟಿ, ಇತ್ತೀಚೆಗೆ ಬಿಜೆಪಿ ತೊರೆದು ಆಪ್ ಸೇರಿದ್ದ ಸುರೀಂದರ್ ಪಾಲ್ ಸಿಂಗ್ ಬಿಟ್ಟು ಅವರು ತಿಮಾರ್‌ಪುರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮೊದಲು ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬಿಟ್ಟು ಎಎಪಿ ಸೇರಿದ್ದ 6 ನಾಯಕರು ಸೇರಿದಂತೆ ಒಟ್ಟು 11 ಅಭ್ಯರ್ಥಿಗಳ ಹೆಸರಿತ್ತು. ಬಿಜೆಪಿಯಿಂದ ಬ್ರಹ್ಮ ಸಿಂಗ್ ತನ್ವಾರ್, ಬಿಬಿ ತ್ಯಾಗಿ, ಅನಿಲ್ ಝಾ ಹಾಗೂ ಕಾಂಗ್ರೆಸ್‌ನಿಂದ ಜುಬೇರ್ ಚೌಧರಿ, ವೀರ್ ಸಿಂಗ್ ದಿಂಗನ್, ಸೋಮೇಶ್ ಶೋಕೀನ್ ಆಮ್ ಆದ್ಮಿ ಪಕ್ಷವನ್ನು ಸೇರಿದ್ದರು. ಇವರನ್ನು ಒಳಗೊಂಡಂತೆ ರಾಮ್ ಸಿಂಗ್ ನೇತಾಜಿ, ಗೌರವ್ ಶರ್ಮಾ, ಮನೋಜ್ ತ್ಯಾಗಿ, ದೀಪಕ್ ಸಿಂಘಾಲ್ ಹಾಗೂ ಸರಿತಾ ಸಿಂಗ್‌ರವರ ಹೆಸರು ಪಟ್ಟಿಯಲ್ಲಿದೆ.
ಸದ್ಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಇನ್ನೂ 39 ಕ್ಷೇತ್ರಗಳಿಗೆ ಘೋಷಣೆ ಮಾಡಬೇಕಿದೆ.