October 1, 2026
Thursday, October 1, 2026
spot_img

ಸಾಧ್ಯವಿರುವ ಎಲ್ಲ ನೆರವುಗಳನ್ನು ನೀಡುತ್ತೇವೆ: ಸ್ಮಿತ್‌ ಮಚ್ಚರ್‌ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದುಬೈ ವಿಮಾನದಲ್ಲಿ ಸಹಪೈಲಟ್‌ನಿಂದ ಚಾಕು ದಾಳಿಗೆ ಒಳಪಟ್ಟು, ಧೈರ್ಯದಿಂದ ಜನರನ್ನು ರಕ್ಷಣೆ ಮಾಡಿದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಕುಟುಂಬದ ಜೊತೆ ಪ್ರಧಾನಿ ಮೋದಿ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಪತ್ನಿ ಹಾಗೂ ಪೋಷಕರ ಜೊತೆ ಮಾತನಾಡಿದ್ದು, ಅವರ ಆರೋಗ್ಯ ಸ್ಥಿತಿ ಇದೀಗ ಸ್ಥಿರವಾಗಿದೆ. ಸ್ಮಿತ್‌ ತುಂಬಾ ಸ್ಟ್ರಾಂಗ್‌ ಅವರು ಶೀಘ್ರವೇ ಗುಣಮುಖರಾಗಿ ಬರಲಿದ್ದಾರೆ ಎಂದು ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ನೂರಾರು ಜನರ ಪ್ರಾಣ ಉಳಿಸಿದ ಸ್ಮಿತ್‌ ಅವರ ಧೈರ್ಯವನ್ನು ಮೆಚ್ಚುತ್ತೇನೆ. ಅವರಿಗೆ ಬೇಕಿರುವ ಎಲ್ಲ ನೆರವುಗಳನ್ನು ನೀಡುತ್ತೇವೆ. ನಿಮ್ಮ ಮಗನ ಧೈರ್ಯ ಹಾಗೂ ಸಮಯಪ್ರಜ್ಞೆ ಎಲ್ಲರಿಗೂ ಮಾದರಿಯಾಗುವಂಥದ್ದು. ಹೆದರಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಪ್ರಧಾನಿ ಮಾತನಾಡಿದ್ದಾರೆ.

ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಒಬ್ಬ ನಾಯಕ. ಅತ್ಯಂತ ಗಂಭೀರ ಅಪಾಯದ ಸಂದರ್ಭದಲ್ಲಿ ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ, ಅವರು ಅಪಾರ ಧೈರ್ಯ ಮತ್ತು ಇತರರ ಪ್ರಾಣವನ್ನು ರಕ್ಷಿಸುವ ಅಚಲ ಸಂಕಲ್ಪವನ್ನು ಪ್ರದರ್ಶಿಸಿದರು ಎಂದು ಮೋದಿ ‘ಎಕ್ಸ್’ ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅವರ ಶೌರ್ಯ ನೂರಾರು ಜನರ ಪ್ರಾಣ ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿತು, ಎಂದು ಹೇಳಿದ ಅವರು, ಈ ಪೈಲಟ್ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ ಎಂದರು.

ಘಟನೆ ಹಿನ್ನೆಲೆ ಏನು?

ಫ್ಲೈ ದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು 174 ಪ್ರಯಾಣಿಕರೊಂದಿಗೆ ದುಬೈನಿಂದ ಟೆಲ್‌ ಅವಿವ್‌ ಕಡೆಗೆ ಹೊರಟಿತ್ತು. ಟೇಕಾಫ್‌ ಆದ ಎರಡು ಗಂಟೆಗಳ ನಂತರ ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ನಡುವೆ ಘರ್ಷಣೆ ನಡೆದಿದೆ. ಓಮನ್‌ ಪ್ರಜೆಯಾಗಿರುವ ಸಹ ಪೈಲಟ್‌ ಮುಖ್ಯ ಕ್ಯಾಪ್ಟನ್‌ ಆಗಿರುವ ಸ್ಮಿತ್‌ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ದಾಳಿಯಿಂದ ಸ್ಮಿತ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ದೇಹದ ಹಲವು ಭಾಗಗಳಿಂದ ರಕ್ತ ಸುರಿದಿದೆ. ಅಷ್ಟು ನೋವಿದ್ದರೂ ಸ್ಮಿತ್‌ ವಿಮಾನದ ಕಂಟ್ರೋಲ್‌ನ್ನು ಸಹ ಪೈಲೆಟ್‌ಗೆ ನೀಡಿಲ್ಲ. ಸಹ ಪೈಲಟ್‌ ವಿಮಾನವನ್ನು ಕ್ರಾಶ್‌ ಮಾಡಲು ಭಾರೀ ಪ್ರಯತ್ನ ಮಾಡಿದ್ದಾರೆ. ಆದರೆ ಸ್ಮಿತ್‌ ಗಟ್ಟಿಯಾಗಿ ನಿಂತು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಕಾಕ್‌ಪಿಟ್‌ನಲ್ಲಿನ ಗಲಾಟೆ ಶಬ್ದಕ್ಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕೆಲ ಧೈರ್ಯಶಾಲಿ ಪ್ರಯಾಣಿಕರು ಸಿಬ್ಬಂದಿಗೆ ಸಾಥ್‌ ನೀಡಿದ್ದಾರೆ.

Must Read