Friday, March 24, 2023

Latest Posts

ದೆಹಲಿ ಮದ್ಯ ಹಗರಣ: ಇಂದು ಇಡಿ ವಿಚಾರಣೆಗೆ ಹಾಜರಾಗ್ತಾರಾ ಕವಿತಾ..ಸಿಎಂ ಕೆಸಿಆರ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶಾದ್ಯಂತ ಸಂಚಲನ ಮೂಡಿಸಿರುವ ದೆಹಲಿ ಮದ್ಯ ಹಗರಣದ ತನಿಖೆ ವೇಗ ಪಡೆದುಕೊಂಡಿದೆ. ಬಿಆರ್‌ಎಸ್ ಎಂಎಲ್‌ಸಿ ಕವಿತಾ ಅವರನ್ನು ಇಡಿ ಶನಿವಾರ ತನಿಖೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಕವಿತಾ ಸಹೋದರ, ತೆಲಂಗಾಣ ಸಚಿವ ಕೆಟಿಆರ್ ತರಾತುರಿಯಲ್ಲಿ ದೆಹಲಿಗೆ ತೆರಳಿದ್ದಾರೆ. ಕವಿತಾ ಬಂಧನವಾಗುವ ಸಾಧ್ಯತೆಗಳಿವೆ ಎಂಬ ವದಂತಿ ಹಿನ್ನೆಲೆಯಲ್ಲಿ ಕೆಟಿಆರ್ ದೆಹಲಿಗೆ ತೆರಳಿದ್ದಾರೆ. ಬಿಆರ್‌ಎಸ್‌ನ ವಕೀಲರು ಮತ್ತು ಪ್ರಮುಖ ನಾಯಕರು ದೆಹಲಿಗೆ ತಲುಪಿದ್ದಾರೆ.

ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ತಿಂಗಳ 9ರಂದು ವಿಚಾರಣೆಗೆ ಹಾಜರಾಗುವಂತೆ ಕವಿತಾಗೆ ಇಡಿ ನೋಟಿಸ್ ಕಳಿಸಿತ್ತು. ಆದರೆ ಕವಿತಾ ಅವರಿಗೆ ಇದೇ ತಿಂಗಳ 9 ಮತ್ತು 10 ರಂದು ಪೂರ್ವ ನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ, 11 ರಂದು ತನಿಖೆಗೆ ಬರುತ್ತೇನೆ ಎಂದು ಇಡಿಗೆ ಉತ್ತರಿಸಿದರು. ಈ ಹಿನ್ನೆಲೆಯಲ್ಲಿ ಇಂದು (ಮಾರ್ಚ್ 11) ಇಡಿ ಮುಂದೆ ಹಾಜರಾಗಲಿದ್ದಾರೆ.

ಈ ಬಗ್ಗೆ ತೆಲಂಗಾಣ ಸಿಎಂ ಕೆಸಿಆರ್ ಪ್ರತಿಕ್ರಿಯಿಸಿದ್ದಾರೆ. ಮದ್ಯ ಹಗರಣದ ಆರೋಪಗಳು ಕಿರುಕುಳದ ಭಾಗವಾಗಿದೆ ಎಂದು ಕೆಸಿಆರ್ ಹೇಳಿದರು. ಈ ಕಿರುಕುಳವನ್ನು ಕಾನೂನಾತ್ಮಕವಾಗಿ ಎದುರಿಸುವಂತೆ ಪಕ್ಷದ ಮುಖಂಡರಿಗೆ ಸಲಹೆ ನೀಡಿದರು. ದೆಹಲಿ ಮದ್ಯ ಹಗರಣದಲ್ಲಿ ತಮ್ಮ ಪುತ್ರಿ ಕವಿತಾಗೆ ಇಡಿ ನೋಟಿಸ್ ಕಳುಹಿಸಿದ್ದಕ್ಕೆ ಕೆಸಿಆರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರದಲ್ಲಿ ದುಷ್ಟ ಸರ್ಕಾರವಿದೆ ಎಂದು ವಾಗ್ದಾಳಿ ನಡೆಸಿದರು. ತನಿಖಾ ಸಂಸ್ಥೆಗಳಿಗೆ ಕಿರುಕುಳ ನೀಡುವ ವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

ಮತ್ತೊಂದೆಡೆ ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ನಡೆದಿದೆ. ಹೈದರಾಬಾದ್ ಉದ್ಯಮಿ ರಾಮಚಂದ್ರ ಪಿಳ್ಳೈ ಅವರು ಜಾರಿ ನಿರ್ದೇಶನಾಲಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇಡಿಗೆ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಶುಕ್ರವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ವಕೀಲರ ಮೂಲಕ ಅರ್ಜಿ ಸಲ್ಲಿಸಿದರು. ಇದರೊಂದಿಗೆ ಪಿಳ್ಳೈ ಅವರ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯ ಇಡಿಗೆ ನೋಟಿಸ್ ಜಾರಿ ಮಾಡಿದೆ.

ಕವಿತಾಗೆ ಬೇನಾಮಿ ಎಂದು ಇಡಿಗೆ ಹೇಳಿಕೆ ನೀಡಿದ್ದ ರಾಮಚಂದ್ರ ಪಿಳ್ಳೈ ಈಗ ಮನಸ್ಸು ಬದಲಾಯಿಸಿದ್ದಾರೆ. ತಮ್ಮ ಹೇಳಿಕೆಯನ್ನು ಹಿಂಪಡೆಯಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಇಡಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಇತ್ತೀಚೆಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕವಿತಾ ಅವರ ವಿಚಾರಣೆ ಶನಿವಾರ ನಡೆಯಲಿರುವ ಸರದಿಯ ಬಗ್ಗೆ ಎಲ್ಲರ ಗಮನವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!