ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮತ್ತೊಂದು ಹೋರಾಟ ನಡೆಯಲಿದ್ದು, ಈಗಾಗಲೇ ಹಲವಾರು ರೀತಿಯ ಪ್ರತಿಭಟನೆಗಳು ನಡೆದಿವೆ. ಜನಪ್ರತಿನಿಧಿಗಳಿಂದ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಮನಗಂಡ ಸ್ವಾಮೀಜಿ ಹೊಸ ದಾರಿಯಲ್ಲಿ ಹೋರಾಟ ಪ್ರಾರಂಭ ಮಾಡಿದ್ದು, ವಕೀಲರ ಮೂಲಕ ಹೋರಾಟಕ್ಕೆ ಸಜ್ಜಾಗಿದ್ದಾರೆ. ಡಿಸೆಂಬರ್ 12ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ ನಮ್ಮ ಹೋರಾಟಕ್ಕೆ ಮಣಿದು ಬೆಳಗಾವಿಯಲ್ಲಿ ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಸಭೆ ಕರೆದಿದ್ದಾರೆ. ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಸಿಎಂ ಜೊತೆಗೆ ವಕೀಲರ ಸಭೆ ಇದೆ ಎಂದಿದ್ದಾರೆ.
ರಾಜ್ಯ ಮಟ್ಟದ ವಕೀಲರ ಸಭೆಯಲ್ಲಿ ಮೂರು ನಿರ್ಣಯ ಮಂಡನೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಪಂಚಮಸಾಲಿ ಲಿಂಗಾಯತ ಸಮಾಜ ಓಬಿಸಿ (OBC) ಪಟ್ಟಿಗೆ ಸೇರಿಸಬೇಕು. ಡಿ.12ರಂದು ಸುವರ್ಣಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬೆಳಗಾವಿಯಲ್ಲಿ ಇಂದು ಪಂಚಮಸಾಲಿ ಸಮಯದಾಯದ ವಕೀಲರ ಪ್ರಥಮ ಪರಿಷತ್ ನಡೆಯಿತು. ಸಭೆಯಲ್ಲಿ ಪಂಚಮಸಾಲಿ ಹೋರಾಟದ ರೂಪುರೇಷೆಗಳನ್ನು ಚರ್ಚೆ ಮಾಡಲಾಗಿದೆ. ಇದೆ ವೇಳೆ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ನೆನಪಿಸಿಕೊಂಡರು.
ಬೆಳಗಾವಿಯ ಅಧಿವೇಶವನದ ವೇಳೆ ಬೆಳಗಾವಿಯಿಂದ ಬೆಂಗಳೂರಿಗೆ ಹೋದ ತಕ್ಷಣ ಕಾನೂನು ತಜ್ಞರ ಸಮ್ಮುಖದಲ್ಲಿ ಸಭೆ ಕರೆಯುತ್ತೆನೆ ಎಂದು ಹೇಳಿದ್ದರು. ಆದರೆ ಈವರೆಗೆ ಸಭೆ ಕರೆದಿಲ್ಲ. ಹೀಗಾಗಿ ಇಂದು ಅವರು ದಿನಾಂಕ ನಿಗದಿ ಮಾಡಿದರೆ ನಾವು ಹೋರಾಟ ಕೈ ಬಿಡುತ್ತೇವೆ ಇಲ್ಲವಾದರೆ ಮತ್ತೆ ನಮ್ಮಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.