ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ಡೆಂಗ್ಯೂ ಜ್ವರವನ್ನು ‘ಸಾಂಕ್ರಾಮಿಕ ರೋಗ’ ಎಂದು ಘೋಷಣೆ ಮಾಡಿದೆ.
ಸಾಂಕ್ರಾಮಿಕ ರೋಗಗಳ ಕಾಯಿದೆ 2020 ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಉಲ್ಲಂಘನೆಗೂ ದಂಡ ನಿಗದಿ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ನೀಡಿದೆ. ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತದೆ.
ಡೆಂಗ್ಯೂ ರೋಗವನ್ನು ಸಾಂಕ್ರಾಮಿಕ ರೋಗ ಪಟ್ಟಿಗೆ ಸೇರಿಸಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಜನರಿಗೆ ಇದುವರೆಗೆ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದೇವೆ. ಆದರೆ ಇದುವರೆಗೆ ನಮಗೆ ಯಾವ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಮಂಗಳೂರು, ಬೆಂಗಳೂರಿನಲ್ಲಿ ಮಾತ್ರ ಪಾಲಿಕೆಗಳು ಕೆಲ ಕ್ರಮ ತೆಗೆದುಕೊಳ್ಳುವ ಅವಕಾಶ ಇತ್ತು, ಬೇರೆ ಕಡೆ ಇರಲಿಲ್ಲ. ಇದೀಗ ಡೆಪ್ಯುಟಿ ಕಮೀಷನರ್, ಡಿಸಿಗಳು ಇನ್ನು ಮುಂದೆ ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡಿದ್ದೇವೆ. ಮನೆ, ಸಂಸ್ಥೆ, ಕಟ್ಟಡಗಳು, ನಿರ್ಮಾಣ ಹಂತದ ಸೈಟ್, ಹೋಟೆಲ್ ಹೀಗೆ ಹಲವು ಸ್ಥಳಗಳ ಸುತ್ತಮುತ್ತ ಸರಿಯಾದ ನಿರ್ವಹಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.
ಗ್ರಾಮೀಣ ಪ್ರದೇಶಗಳ ಮನೆಗಳಿಗೆ 200 ರೂ. ದಂಡ, ನಗರ ಪ್ರದೇಶಗಳ ಮನೆಗಳಿಗೆ 400 ರೂ., ನಗರ ಪ್ರದೇಶದ ವಾಣಿಜ್ಯ ಪ್ರದೇಶ, ಮಾಲ್, ಮಾರುಕಟ್ಟೆಗಳಿಗೆ 1 ಸಾವಿರ ರೂ, ಗ್ರಾಮೀಣ ಪ್ರದೇಶಗಳಲ್ಲಿ 500 ರೂವರೆಗೆ ದಂಡ ಇರಲಿದೆ. ಖಾಲಿ ಸ್ಥಳ, construction ಸೈಟ್ ( ನಗರ ಪ್ರದೇಶ) 2 ಸಾವಿರ ರೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂ ದಂಡ ಇರಲಿದೆ.
ರೋಗಲಕ್ಷಣ
ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.