ಕಾರ್ಮಿಕ ಇಲಾಖೆ ಪ್ರತ್ಯೇಕ ವೆಬ್‌ಸೈಟ್; ಉಚಿತ ಬಸ್ ಪಾಸ್: ಸಿಎಂ ಬೊಮ್ಮಾಯಿ ಚಾಲನೆ

ಹೊಸದಿಗಂತ ವರದಿ,ಬೆಂಗಳೂರು:

ತಮ್ಮ ನೇತೃತ್ವದ ಸರ್ಕಾರದ ಪ್ರಥಮ ಪ್ರಾಶಸ್ತ್ಯ ವೇ ಕಾರ್ಮಿಕರ ಕಲ್ಯಾಣ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾರ್ಮಿಕ ವರ್ಗಕ್ಕೆ ಸಮಯಕ್ಕೆ ಸರಿಯಾಗಿ ಸವಲತ್ತುಗಳನ್ನು ನೀಡುವ ಮೂಲಕ ಅವರ ಶ್ರಮಕ್ಕೆ ಬೆಲೆ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಯೋಜಿಸಿದ್ದ ಸಮಾರಂಭದಲ್ಲಿ ಇಲಾಖೆಯ ಪ್ರತ್ಯೇಕ ತಂತ್ರಾoಶ (ವೆಬ್‌ಸೈಟ್), ರಾಜ್ಯದಾದ್ಯಂತ ಕಟ್ಟಡ ಕಾರ್ಮಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ಮತ್ತು ಶೈಕ್ಷಣಿಕವಾಗಿ ಸಾಧನೆಗೈದಿರುವ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಹಿರಿದು, ತಾವು ಎಷ್ಟೇ ಹಣ ಮಂಜೂರು ಮಾಡಿದರೂ ಬಿಸಿಲಿನಲ್ಲಿ ಕೆಲಸ ಮಾಡಿ ರಸ್ತೆ ನಿರ್ಮಾಣದಂತಹ ಕಾಮಗಾರಿಗಳನ್ನು ಮಾಡುವುದು ಕಾರ್ಮಿಕರು, ಹೀಗಾಗಿ ಅವರಿಂದಲೇ, ಈ ಕಾರ್ಮಿಕರಿಗೆ ಬದುಕಿನ ಭರವಸೆ ಮೂಡಿಸಬೇಕು. ಕಾರ್ಮಿಕರಿಗೆ ತಮ್ಮ ಕುಟುಂಬ ಮತ್ತು ಮಕ್ಕಳ ಭವಿಷ್ಯ ಸದೃಢ ಎನಿಸಬೇಕು. ಅದಕ್ಕೆ ಸಮಾಜ, ಸರ್ಕಾರ ಮತ್ತು ಖಾಸಗಿ ಕೈಗಾರಿಕೆಗಳು ಮುಂದಾಗಬೇಕು. ಶ್ರಮಿಕನಿಗೆ ಸ್ಥಿರತೆ ನೀಡಿದಾಗ ಉತ್ತಮ ಕೆಲಸ ಆಗಲಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಮಿಕ ನಿಧಿಯಿಂದ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.

“ರೈತರು ಮತ್ತು ಕಾರ್ಮಿಕರು ಶ್ರಮ ಜೀವಿಗಳು” ಅಂದು ರವೀಂದ್ರನಾಥ್ ಠಾಗೂರ್ ಅವರು ‘ದೇವರೆಲಿದ್ದಾನೆ?’ ಎಂಬುದಕ್ಕೆ “ದೇವರು ರೈತನ ಶ್ರಮದಲ್ಲಿದ್ದಾನೆ, ಕಾರ್ಮಿಕರ ಬೆವರಿನಲ್ಲಿದ್ದಾನೆ” ಎಂದಿದ್ದರು, ಹೀಗಾಗಿ “ರೈತರು- ಕಾರ್ಮಿಕರು- ಸೈನಿಕರು’ ಬಹಳ ಮುಖ್ಯವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಕ್ಲಿನಿಕ್, ಕಾರ್ಮಿಕ ಮಕ್ಕಳ ಉನ್ನತ ಶಿಕ್ಷಣಕ್ಕೆ ತರಬೇತಿ, ಮನೆ ಕಟ್ಟಲು ಸಹಾಯ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದ್ದು, ಇಂದು ಈಯೋಜನೆಗಳ ಪಟ್ಟಿಗೆ ಉಚಿತ ಬಸ್ ಪಾಸ್ ಸೇರಿದೆ ಎಂದು ನುಡಿದರಲ್ಲದೆ, ಕಟ್ಟಡ ಕಾರ್ಮಿಕರು ಕೆಲಸವಿದ್ದೆಡೆಗೆ ತೆರಳ ಬೇಕಿರುತ್ತದೆ. ಹೀಗಾಗಿ ಅವರ ಅನುಕೂಲಕ್ಕೆ ಉಚಿತ ಬಸ್ ಪಾಸ್ ಸೇವೆ ಆರಂಭಿಸಲಾಗಿದೆ ಎಂದ ಮುಖ್ಯಮಂತ್ರಿಗಳು, ರಾಜ್ಯದ ಎಲ್ಲ ಕಟ್ಟಡ ಕಾರ್ಮಿಕರಿಗೂ ಈ ಉಚಿತ ಬಸ್ ಪಾಸ್ ಸೇವೆ ದೊರಕಿಸಿಕೊಡುವಂತೆ ಇಲಾಖೆ ಅಧಿಕಾರಿಗಳಿಗೆ ಕರೆ ನೀಡಿದರು.

ರಾಜ್ಯದ ಶ್ರಮಿಕ ವರ್ಗದ ಬಹು ದಿನಗಳಿಂದ ಬಾಕಿ ಉಳಿದಿದ್ದ ಸವಲತ್ತುಗಳ ಅರ್ಜಿಗಳನ್ನು ಒಂದೇ ಬಾರಿಗೆ ಇತ್ಯರ್ಥ ಪಡಿಸುವ ಸಲುವಾಗಿ ಕಾರ್ಮಿಕ ಅದಾಲತ್‌ಗಳನ್ನು ನಡೆಸಲಾಗಿದೆ ಎಂದು ಇದೇ ವೇಳೆ ಹೇಳಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕಾರ್ಮಿಕ ಅದಾಲತ್‌ಗೆ ಸಲ್ಲಿಕೆಯಾಗಿದ್ದ 3 ಲಕ್ಷಕ್ಕೂ ಅಧಿಕ ಅರ್ಜಿಗಳ ಪೈಕಿ ಸ್ಥಳದಲ್ಲಿಯೇ 2 ಲಕ್ಷದ 97 ಸಾವಿರ ಅರ್ಜಿಗಳನ್ನು ವಿಲೇ ಮಾಡಲಾಗಿದ್ದು, ಒಟ್ಟಾರೆ 92 ಕೋಟಿ ರೂಪಾಯಿಗಳ ಸವಲತ್ತು ಮತ್ತು ಸಹಾಯಧನವನ್ನು ವಿತರಿಸಲಾಯಿತು ಎಂದು ಸಚಿವರು ತಿಳಿಸಿದರು.

ಶ್ರಮಿಕ ವರ್ಗ ಮತ್ತು ಅವರ ಕುಟುಂಬ ವರ್ಗದ ಸಂಕ್ಷೇಮಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದ ಕಾರ್ಮಿಕ ಸಚಿವರು, 750 ಕಾರ್ಮಿಕ ಮಕ್ಕಳ ಉನ್ನತ ವ್ಯಾಸಂಗಕ್ಕೆ ತರಬೇತಿ ನೀಡಲಾಗುತ್ತಿದೆ. 2019 ಮತ್ತು 2022ರ ತಮ್ಮ ಅಧಿಕಾರದ ಅವಧಿಯಲ್ಲಿ ಒಟ್ಟಾರೆ 3,1619 ಕೋಟಿ ರೂ. ಸಹಾಯಧನವನ್ನು ವಿತರಿಸಲಾಗಿದ್ದು, ಇದು ಕಾರ್ಮಿಕ ಇಲಾಖೆ ಇತಿಹಾಸದಲ್ಲೇ ದಾಖಲೆ ಎಂದು ಸಚಿವ ಹೆಬ್ಬಾರ್ ಅವರು ವಿವರಿಸಿದರು.

ರಾಜ್ಯದ ಕಾರ್ಮಿಕರ ಸಂಕ್ಷೇಮಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ ರೂಪಿಸಿದ್ದು, ಇಂದು ಕರ್ನಾಟಕ ಕಾರ್ಮಿಕ ಇಲಾಖೆಗಾಗಿಯೇ ಪ್ರತ್ಯೇಕ ವೆಬ್‌ಸೈಟ್‌ಹೊಂದಿರುವ ಎರಡನೇ ರಾಜ್ಯವಾಗಿದೆ ಎಂದರಲ್ಲದೆ, ಉಚಿತ ಬಸ್ ಪಾಸ್ ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಕಾರ್ಮಿಕರ ಮಕ್ಕಳಿಗೆ 10 ಸಾವಿರ ರೂ. ಪ್ರತಿಭಾ ಪುರಸ್ಕಾರ ನೀಡುವ ಯೋಜನೆಯನ್ನೂ ಜಾರಿಗೊಳಿಸಲಾಗುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!