Sunday, October 1, 2023

Latest Posts

ಅಕ್ಕಿ ಕಾಳಿನಲ್ಲಿ ಮೋದಿ ಚರಿತ್ರೆ ಬರೆಯುವ ಹಂಬಲ – ಮೈಕ್ರೊ ಆರ್ಟ್ ಕಲಾವಿದನ ಧ್ಯೇಯ

ಶಿವಲಿಂಗೇಶ.ಎಸ್.ಕುಂದೂರ

ಗುತ್ತಲ: ಕಲೆ ಯಾರ ಸ್ವತ್ತೂ ಅಲ್ಲ. ಕಲಾ ಕ್ಷೇತ್ರದ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಏಕಾಗ್ರತೆ ಅವಶ್ಯವೇ ಹೊರತು ಆರ್ಥಿಕ ಸ್ಥಿತಿಗತಿಯಲ್ಲ ಎಂಬುದಕ್ಕೆ ಮೈಕ್ರೊ ಆರ್ಟ್ ಕಲಾವಿದ ಪರಮೇಶ ಉತ್ತಮ ನಿದರ್ಶನರಾಗಿದ್ದಾರೆ.

ಮೂಲತ: ಹಾವೇರಿ ತಾಲೂಕಿನ ಗುಡಿಸಲುಕೊಪ್ಪ ಗ್ರಾಮದ ಪರಮೇಶ ಬಂಡಿ ಬಡ ಕುಟುಂಬದ ಹಿನ್ನೆಲೆಯವರಾದರೂ ಕಲಾ ಶ್ರೀಮಂತಿಕೆ ಹೊಂದಿದ್ದಾರೆ. ಪಿಯುಸಿ ವ್ಯಾಸಂಗದ ನಂತರ ಕಲಾ ಕ್ಷೇತ್ರದಲ್ಲೇ ಅತ್ಯಂತ ವಿಶಿಷ್ಟವಾದ ಮೈಕ್ರೊ ಆರ್ಟ್‌ನಲ್ಲಿ ಆಸಕ್ತಿ ಮೂಡಿಸಿಕೊಂಡ ಪರಮೇಶ ಆರಂಭದಲ್ಲಿ ಅಕ್ಕಿ ಕಾಳಿನಲ್ಲಿ ಅಕ್ಷರ ಬರೆಯಲು ಆರಂಭಿಸಿದರು. ಇವರ ವಿಶಿಷ್ಟ ಪ್ರತಿಭೆ ಗುರುತಿಸಿದ ಅವರ ಸ್ನೇಹಿತ ಭೀಮಸೇನ್ ಗೋಕುಲ ಹಾಗೂ ಇತರರು ಪರಮೇಶ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮುಂದೆ ಜೀವನೋಪಾಯಕ್ಕೆ ದಕ್ಷಿಣ ಕನ್ನಡದ ಸುಬ್ರಮಣ್ಯಕ್ಕೆ ತೆರಳಿ ಅಲ್ಲಿ ಮೈಕ್ರೊ ಆರ್ಟ್ ಕಲೆಯಲ್ಲಿ ಸಾಧನೆ ಗೈಯುತ್ತಿದ್ದಾರೆ.

ಪರಮೇಶ ಬಂಡಿ ಈವರೆಗೆ ಅಕ್ಕಿ ಕಾಳಿನಲ್ಲಿ ನಾಡಗೀತೆ, ವಂದೇ ಮಾತರಂ, ಸುಬ್ರಮಣ್ಯ ಸ್ವಾಮಿ ಸ್ತೋತ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನೆ ಸೇರಿದಂತೆ ಇನ್ನು ಅನೇಕ ಗೀತೆಗಳು ಅವರ ಕೈಯಿಂದ ಮೂಡಿ ಬಂದಿವೆ.

ಪರಮೇಶ ಅವರು 136 ಅಕ್ಕಿ ಕಾಳುಗಳನ್ನು ಬಳಸಿ ಕೇವಲ 80 ನಿಮಿಷದಲ್ಲಿ ನಾಡಗೀತೆ ಬರೆದಿದ್ದಾರೆ. ಪರಮೇಶ ಅವರು ತಮ್ಮ ಮೈಕ್ರೊ ಕಲಾಕೃತಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ಸುನೀಲ್ ಕುಮಾರ ಕಾರ್ಕಳ, ಕುಕ್ಕೆಸುಬ್ರಮಣ್ಯ ಸ್ವಾಮಿ ಆಡಳಿತ ಮಂಡಳಿಯವರಿಗೆ ರಾಣೇಬೆನ್ನೂರಿನ ವಂದೇ ಮಾತರಂ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಮುಂದಿನ ಕಲಾಕೃತಿ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ಸುಮಾರು 50 ಸಾವಿರದಿಂದ 1 ಲಕ್ಷ ಅಕ್ಕಿಕಾಳಿನಲ್ಲಿ ಜೈ ಶ್ರೀರಾಮ ಎಂದು ಬರೆಯಲು ಪರಮೇಶ ಇಚ್ಛಿಸಿದ್ದಾರೆ. ಜೊತೆಗೆ ಸುಮಾರು 10 ಸಾವಿರದಿಂದ 20 ಸಾವಿರ ಅಕ್ಕಿ ಕಾಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ರಚಿಸಬೇಕೆಂದುಕೊಂಡಿದ್ದಾರೆ.

ನನ್ನ ವಿಶಿಷ್ಟ ಕಲೆಗೆ ಅನೇಕರು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ. ಈ ವಿಷಯದಲ್ಲಿ ನನ್ನ ಸ್ನೇಹಿತರನ್ನು ನೆನೆಯುವೆ. ಸದ್ಯ ಜೀವನೋಪಾಯಕ್ಕೆ ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ವ್ಯಾಪಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದಿದೆ ಎಂದು ಮೈಕ್ರೋ ಆರ್ಟ್ ಕಲಾವಿದ ಪರಮೇಶ ಬಂಡಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!