ದೇವಟ್‍ಪರಂಬು ನರಮೇಧ ಘಟನೆ ಅಂತಾರಾಷ್ಟ್ರೀಯ ಹತ್ಯಾಕಾಂಡಗಳ ಸ್ಮರಣಾರ್ಥ ಪಟ್ಟಿಗೆ ಸೇರಿಸಲು ಒತ್ತಾಯ

ಹೊಸದಿಗಂತ ವರದಿ, ಮಡಿಕೇರಿ
ದೇವಟ್‍ಪರಂಬುವಿನಲ್ಲಿ ಫ್ರೆಂಚರು ನಡೆಸಿದ ದುರಂತ ನರಮೇಧವನ್ನು ಅಂತರರಾಷ್ಟ್ರೀಯ ಹತ್ಯಾಕಾಂಡಗಳ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್ ಸಿ) ಸಂಘಟನೆಯು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡವ ಜಾಗೃತಿ ಸಭೆ ನಡೆಸಿ ಮನವಿ ಸಲ್ಲಿಸಿತು.
ಜಿಲ್ಲಾಡಳಿತದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ದೇವಟ್‍ಪರಂಬು ಹತ್ಯೆ ಅಪರಾಧಿಗಳ ಈಗಿನ ಪೀಳಿಗೆ ವಿರುದ್ಧ ಸೇಡು ತೀರಿಸಿಕೊಳ್ಳಲು ಅಥವಾ ಮಾಡಿದ ಪೂರ್ವಿವಿಕರು ದಿನ ಪಾಪಗಳಿಗೆ ಈಗಿನವರನ್ನು ಹೊಣೆಗಾರರನ್ನಾಗಿ ಮಾಡಲು ನಾವುಗಳು ಉದ್ದೇಶಿಸಿಲ್ಲ. ಬದಲಿಗೆ ಪ್ರಾಣ ಕಳೆದುಕೊಂಡ ನಮ್ಮ ಹಿರಿಯರ ಆತ್ಮಗಳಿಗೆ ಚಿರಶಾಂತಿ ಸಿಗಬೇಕು ಮತ್ತು ಅಂತಾರಾಷ್ಟ್ರೀಯ ಸ್ಮಾರಕವನ್ನು ಸ್ಥಾಪಿಸುವ ಮೂಲಕ ಮರಣೋತ್ತರವಾಗಿ ಸ್ಮರಿಸಿ ಗೌರವಿಸಬೇಕು ಎನ್ನುವ ಭಾವನಾತ್ಮಕ ಗುರಿ ನಮ್ಮದು ಎಂದು ಸ್ಪಷ್ಟಪಡಿಸಿದರು.
ದೇವಟ್‍ಪರಂಬು ಕೊಡವ ನರಮೇಧದ ಘಟನೆಯನ್ನು ಯುಎನ್‍ಒ ದ ಅಂತರರಾಷ್ಟ್ರೀಯ ಹತ್ಯಾಕಾಂಡಗಳ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು, ಜಿಒಐ, ಯುಎನ್‍ಒ ಮತ್ತು ಫ್ರೆಂಚ್ ಸರ್ಕಾರದ ಜಂಟಿ ನಿಧಿಯಿಂದ ಅಂತರರಾಷ್ಟ್ರೀಯ ಸ್ಮಾರಕ ಸ್ಥಾಪಿಸಬೇಕು, ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದಳವು ಟಿಪ್ಪುವಿನ ಸಹಯೋಗದಲ್ಲಿ ದೇವಟ್‍ಪರಂಬುವಿನಲ್ಲಿ ನಡೆಸಿದ ಕೊಡವ ನರಮೇಧಕ್ಕೆ ಫ್ರೆಂಚ್ ಸರ್ಕಾರ ಕ್ಷಮೆಯಾಚಿಸಬೇಕು, 237 ವರ್ಷಗಳ ಹಿಂದೆ ಸಂಭವಿಸಿದ ಹತ್ಯಾಕಾಂಡವನ್ನು ಖಂಡಿಸುವ ನಿರ್ಣಯವನ್ನು ಭಾರತೀಯ ಸಂಸತ್ತು ಮತ್ತು ವಿಶ್ವಸಂಸ್ಥೆ ಅಂಗೀಕರಿಸಬೇಕು.
ದೇವಟ್‍ಪರಂಬು ದುರಂತ ಮತ್ತು ಅರಮನೆಯ ಪಿತೂರಿಯಿಂದಾಗಿ 1500 ಕೊಡವ ಕುಲಗಳಲ್ಲಿ 700 ಕುಲಗಳು ನಾಶವಾದವು. ಇದರಿಂದ ಕೊಡವ ಜನಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಉಂಟಾಗಿರುವ ಮಾನವನ ನಷ್ಟವನ್ನು ಸರಿದೂಗಿಸಲು ಸೂಕ್ಷ್ಮಾತಿ ಸೂಕ್ಷ್ಮ ಕೊಡವ ಜನಾಂಗಕ್ಕೆ ಎಸ್‍ಟಿ ಟ್ಯಾಗ್ ನೀಡಿ ಸಾಂವಿಧಾನಿಕವಾಗಿ ರಕ್ಷಣೆ ನೀಡಬೇಕು. ಭಾರತದ ಸಂವಿಧಾನ ಪರಾಮರ್ಶೆ ಆಯೋಗ ಶಿಫಾರಸ್ಸು ಮಾಡಿರುವಂತೆ 371(ಕೆ) ವಿಧಿಯಡಿ ಕೊಡವ ರಾಜಕೀಯ ಸ್ವಾಯತ್ತತೆ ರೂಪಿಸಬೇಕು. ವಿಶ್ವ ಪರಂಪರೆಯ ತಾಣವಾಗಿ “ಕುರುಕ್ಷೇತ್ರ”ಕ್ಕೆ ಸಮಾನವಾಗಿ ದೇವಟ್‍ಪರಂಬನ್ನು ಗುರುತಿಸಬೇಕು. ಸಂವಿಧಾನದ 25 ಮತ್ತು 26 ನೇ ವಿಧಿಗಳಡಿಯಲ್ಲಿ ಸಿಖ್ ಕಿರ್ಪಾಣ್ ಮಾದರಿಯಲ್ಲಿ “ಕೊಡವ ಸಂಸ್ಕಾರ ಗನ್” ಗೆ ರಾಜ್ಯಾಂಗ ಭದ್ರತೆ ನೀಡಬೇಕೆಂದು ನಾಚಪ್ಪ ಒತ್ತಾಯಿಸಿದರು.
ಶಿರಸ್ತೇದಾರ್ ಪ್ರಕಾಶ್ ಮನವಿ ಪತ್ರ ಸ್ವೀಕರಿಸಿದರು. ಸಿಎನ್‍ಸಿ ಪ್ರಮುಖರಾದ ಅಜ್ಜಿನಿಕಂಡ ಇನಿತಾ ಮಾಚಯ್ಯ, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ (ನಿವೃತ್ತ), ಕೂಪದಿರ ಪುಷ್ಪಾ ಮುತ್ತಪ್ಪ, ಕಲಿಯಂಡ ಪ್ರಕಾಶ್, ಅಜ್ಜಿಕುಟೀರ ಲೋಕೇಶ್, ಅರೆಯಡ ಗಿರಿ, ಬೊಟ್ಟಂಗಡ ಗಿರೀಶ್, ಮಣವಟ್ಟಿರ ಜಗ್ಗು, ಜಮ್ಮಡ ಸಿ.ಮೋಹನ್, ಮದ್ರಿರ ಕರುಂಬಯ್ಯ, ಪುಳ್ಳಂಗಡ ನಟೇಶ್, ಪಟ್ಟಮಾಡ ಕುಶ, ಮಣವಟ್ಟಿರ ಉತ್ತಮ, ಮಣವಟ್ಟಿರ ಚಿಣ್ಣಪ್ಪ, ಕಿರಿಯಮಾಡ ಶರಿನ್, ಅಜ್ಜಿನಿಕಂಡ ಸನ್ನಿಮಾಚಯ್ಯ, ಪುಲ್ಲೇರ ಕಾಳಪ್ಪ, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ವಿಜು, ಪುದಿಯೊಕ್ಕಡ ಕಾಶಿ, ಚೋಳಪಂಡ ನಾಣಯ್ಯ, ನಂದಿನೆರವಂಡ ಅಪ್ಪಯ್ಯ, ಅಪ್ಪರಂಡ ಪ್ರಸಾದ್, ಮುಕ್ಕಾಟಿರ ಕಿಟ್ಟು, ನಂದಿನೆರವಂಡ ದಿನೇಶ್, ಚೀಯಬೆರ ಸತೀಶ್ ಪಾಲ್ಗೊಂಡು ಸಂವಿಧಾನದ ಹೆಸರಿನಲ್ಲಿ ಕೊಡವರ ಪರ ಬೇಡಿಕೆಗಳ ಗುರಿ ಸಾಧಿಸಲು ಪ್ರಮಾಣ ವಚನ ಸ್ವೀಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!