ಹೊಸದಿಗಂತ ಡಿಜಿಟಲ್ ಡೆಸ್ಕ್
182 ಸದಸ್ಯ ಬಲದ ಗುಜರಾತ್ ಅಸೆಂಬ್ಲಿಯಲ್ಲಿ ಭಾರತೀಯ ಜನತಾ ಪಕ್ಷವು ಗುರುವಾರ ಸಾರ್ವಕಾಲಿಕ ಗರಿಷ್ಠ 150+ ಸ್ಥಾನಗಳತ್ತ ದಾಪುಗಾಲಿಡುತ್ತಿದ್ದು, ಕೇಸರಿ ಪಾಳೆಯ ಸಂಭ್ರಮದಲ್ಲಿ ಮಿಂದೇಳುತ್ತಿದೆ.
ʼಈ ಗೆಲುವು ತನ್ನ ಅಭಿವೃದ್ಧಿ ಕಾರ್ಯಸೂಚಿಯ ಪ್ರತಿಬಿಂಬ ಮತ್ತು ಕಾಂಗ್ರೆಸ್‌ನ “ನಕಾರಾತ್ಮಕ ರಾಜಕೀಯದ ಸೋಲು” ಎಂದು ಬಿಜೆಪಿ ಬಣ್ಣಿಸಿದೆʼ
ಗುಜರಾತ್‌ನಲ್ಲಿ ದಾಖಲೆಯ ಏಳನೇ ಅವಧಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಜ್ಜಾಗಿದೆ ಎಂಬ ಟ್ರೆಂಡ್‌ಗಳು ಪ್ರತಿಬಿಂಬಿಸುತ್ತಿದ್ದಂತೆ ಕೇಸರಿ ಪಾಳೆಯವು ಹಬ್ಬದ ಮೂಡ್‌ಗೆ ಹೋಗಿದೆ. ಬಿಜೆಪಿ ಕಾರ್ಯಕರ್ತರು ಬೀದಿ ಬೀದಿಗಳಲ್ಲಿ ಸಂತೋಷದಿಂದ ನೃತ್ಯ ಮಾಡುತ್ತಿದ್ದಾರೆ. ರಾಜಧಾನಿ ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ನೆರೆದಿದ್ದಾರೆ.
“ಇದು ಪಕ್ಷದ ಡಬಲ್ ಇಂಜಿನ್ ಅಭಿವೃದ್ಧಿ ಅಜೆಂಡಾದ ವಿಜಯವಾಗಿದೆ. ಬೃಹತ್ ತೀರ್ಪು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮೇಲಿನ ಜನರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ರಾಜ್ಯದಲ್ಲಿ ಪಕ್ಷವು ನಡೆಸಿದ ಅಭಿವೃದ್ಧಿಯ ಅಜೆಂಡಾದ ವಿಜಯವಾಗಿದೆ” ಎಂದು ಗುಜರಾತ್ ಎಂದು ಬಿಜೆಪಿ ವಕ್ತಾರ ಯಮಲ್ ವ್ಯಾಸ್ ಪಿಟಿಐಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಸೋಲಿನ ಬಗ್ಗೆ ಮಾತನಾಡಿದ ವ್ಯಾಸ್, “ನಕಾರಾತ್ಮಕ ರಾಜಕೀಯವು ಕಾಂಗ್ರೆಸ್ ಅನ್ನು ಎಲ್ಲಿಯೂ ಕೊಂಡೊಯ್ಯುವುದಿಲ್ಲ, ಕಾಂಗ್ರೆಸ್ ಈಗಲಾದರೂ ಪಾಠ ಕಲಿಯಬೇಕು. ಕಾಂಗ್ರೆಸ್ ಅನ್ನು ರಾಜ್ಯದಿಂದ ಜನಸಾಮಾನ್ಯರು ಅಳಿಸಿ ಹಾಕಿದ್ದಾರೆ” ಎಂದು ಅವರು ಹೇಳಿದರು.
ಏಳು ಸ್ಥಾನಗಳಲ್ಲಿ ಮುನ್ನಡೆಯುತ್ತಿರುವ ಆಮ್ ಆದ್ಮಿ ಪಕ್ಷದ ಹೊಸ ಚುನಾವಣಾ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ವ್ಯಾಸ್, ಎಎಪಿಯ ಉಪಸ್ಥಿತಿಯು ಕೇವಲ ಸಾಮಾಜಿಕ ಮಾಧ್ಯಮ ಮತ್ತು ನಗರ ಜನಸಂಖ್ಯೆಯ ಒಂದು ವರ್ಗಕ್ಕೆ ಸೀಮಿತವಾಗಿದೆ ಎಂದು ಅಭಿಪ್ರಾಯಪಟ್ಟರು.