October 18, 2026
Sunday, October 18, 2026
spot_img

ಉಡುಪಿ ಜಿಲ್ಲೆಗೆ ಡಿಜಿಪಿ ಡಾ. ಸಲೀಂ ಭೇಟಿ: ಕಾಲಮಿತಿಯೊಳಗೆ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಜಿಲ್ಲೆಗೆ ಇಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ ಡಾ.ಎಂ.ಎ.ಸಲೀಂ ಅವರು ಭೇಟಿ ನೀಡಿದ್ದು, ಕರಾವಳಿ ಕಾವಲು ಪಡೆ, ಮಲ್ಪೆ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ವೇಳೆ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಾಪಾಡಲು ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದ ಅವರು, ಅದೇ ರೀತಿ ಮುಂದುವರಿಸುವಂತೆ ಸೂಚಿಸಿದರು. ಜೊತೆಗೆ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಮುಖ್ಯವಾಗಿ ಸೊತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವುದರ ಜೊತೆಗೆ ತಡೆಗಟ್ಟುವ ಕ್ರಮಗಳನ್ನು ಬಲಪಡಿಸಬೇಕು. ಅಪರಾಧ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಉಡುಪಿ ಜಿಲ್ಲೆಯಲ್ಲಿ ಆಸರೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಾವು ಉಡುಪಿ ಜಿಲ್ಲಾ ಎಸ್‌ಪಿ ಆಗಿದ್ದ ಸಂದರ್ಭದಲ್ಲಿ ಪರಿಚಯಿಸಿದ್ದು ಈಗ ರಾಜ್ಯಾದ್ಯಂತ ಅನುಷ್ಠಾನಗೊಳ್ಳುತ್ತಿದೆ ಎಂದರು.

ಉಡುಪಿ ಜಿಲ್ಲೆಯ ನಾಗರಿಕರು ಸುಶಿಕ್ಷಿತರು ಹಾಗೂ ಶಾಂತಿಪ್ರಿಯರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ, ಪೊಲೀಸ್ ಇಲಾಖೆಯೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಮಲ್ಪೆಯ ಕರಾವಳಿ ಕಾವಲು ಪಡೆಯ ಪರಿವೀಕ್ಷಣೆಯ ವೇಳೆ ಪೊಲೀಸ್ ಮಹಾನಿರೀಕ್ಷಕರು, ಪಶ್ಚಿಮ ವಲಯ ಮಂಗಳೂರು ಹಾಗೂ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Must Read