June 19, 2026
Friday, June 19, 2026
spot_img

ಧರ್ಮಸ್ಥಳ ಕೇಸ್ : SIT ಅಧಿಕಾರಿಗಳ ಕಾರು ಪಲ್ಟಿ, ತಪ್ಪಿದ ಭಾರಿ ಅನಾಹುತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳದ ವಿವಾದಾತ್ಮಕ ‘ಬುರುಡೆ ಪ್ರಕರಣ’ದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳಿದ್ದ ಕಾರು ಚಾರ್ಮಾಡಿ ಘಾಟ್‌ನಲ್ಲಿ ಭೀಕರ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಎಸ್‌ಐಟಿ ಎಸ್‌ಪಿ ಸಿ. ಎ. ಸೈಮನ್ ಸೇರಿದಂತೆ ನಾಲ್ವರು ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ:

ಧರ್ಮಸ್ಥಳ ಬುರುಡೆ ಪ್ರಕರಣದ ಮುಖ್ಯ ತನಿಖಾಧಿಕಾರಿ ಆಗಿರುವ ಚಿಕ್ಕಮಗಳೂರು ಜಿಲ್ಲಾ ಎಸ್‌ಪಿ ಜೀತೇಂದ್ರ ಕುಮಾರ್ ದಯಾಮನನ್ನು ಭೇಟಿಯಾಗಲು ಎಸ್‌ಐಟಿ ಎಸ್‌ಪಿ ಸಿ. ಎ. ಸೈಮನ್ ತಂಡ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿತ್ತು. ಪ್ರಕರಣದ ಮುಂದಿನ ತನಿಖಾ ಹಂತಗಳ ಕುರಿತು ಮಹತ್ವದ ಚರ್ಚೆ ನಡೆಸಲು ಇಡೀ ತಂಡ ಪ್ರಯಾಣ ಬೆಳೆಸಿತ್ತು ಎನ್ನಲಾಗಿದೆ.

ಈ ವೇಳೆ ಇಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ಅಪಾಯಕಾರಿ ತಿರುವೊಂದರ ಬಳಿ ತಲುಪಿದಾಗ, ಚಾಲಕನ ನಿಯಂತ್ರಣ ತಪ್ಪಿದ ವಾಹನವು ದರೆಗೆ ಡಿಕ್ಕಿ ಹೊಡೆದು ರಸ್ತೆಯಲ್ಲೇ ಪಲ್ಟಿಯಾಗಿದೆ.

ಇದನ್ನು ಓದಿ:

ಗಾಯಾಳುಗಳ ವಿವರ:

ಅಪಘಾತದ ಸಮಯದಲ್ಲಿ ಕಾರಿನಲ್ಲಿ ಎಸ್‌ಐಟಿ ಎಸ್‌ಪಿ ಸಿ. ಎ. ಸೈಮನ್,ಪೊಲೀಸ್ ಇನ್ಸ್‌ಪೆಕ್ಟರ್ ಕುಸುಮಾಧರ್, ಪೊಲೀಸ್ ಸಿಬ್ಬಂದಿ ಮಂಜುನಾಥ್ ಹಾಗೂ ವಾಹನದ ಚಾಲಕ ಇದ್ದರು ಎಂದು ತಿಳಿದು ಬಂದಿದೆ. ಕಾರು ಪಲ್ಟಿಯಾದ ರಭಸಕ್ಕೆ ವಾಹನವು ಜಖಂಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರಿಗೂ ಕೇವಲ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು:

ಅಪಘಾತ ನಡೆದ ಬೆನ್ನಲ್ಲೇ ಎಸ್‌ಪಿ ಸಿ. ಎ. ಸೈಮನ್ ಹಾಗೂ ತನಿಖಾ ತಂಡದ ಸದಸ್ಯರು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಘಟನೆ ಕುರಿತು ಅಧಿಕೃತ ದೂರು ದಾಖಲಿಸಿದ್ದಾರೆ. ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !