ಈ ದೇಶಕ್ಕಾಗಿ ನಿಮ್ಮ ಮನೆಯ ನಾಯಿಯಾದರೂ ಸತ್ತಿದೆಯೇ?: ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಹೇಳಿಕೆ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರು ಖರ್ಗೆ ವಿರುದ್ಧ ತಿರುಗಿಬಿದಿದ್ದು, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯನ್ನು “ಭಾರತ್ ತೋಡೋ” ಎಂದು ಲೇವಡಿ ಮಾಡಿದ್ದಕ್ಕಾಗಿ ಬಿಜೆಪಿಗೆ ತಿರುಗೇಟು ನೀಡುವ ಭರದಲ್ಲಿ ಖರ್ಗೆ ವಿವಾದಾತ್ಮಕ ಪದ ಬಳಸಿದ್ದಾರೆ. ನಿಮ್ಮ ಮನೆಯ ನಾಯಿಯಾದರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ಯಾ ಎಂದು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

ರಾಜಸ್ಥಾನದ ಅಲ್ವಾರ್‌ನಲ್ಲಿ ಮಾತನಾಡಿದ್ದ ಖರ್ಗೆ, ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ‍್ಯವನ್ನು ತಂದುಕೊಟ್ಟಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಸೇರಿದಂತೆ ಅನೇಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದ್ರೆ ಈ ದೇಶಕ್ಕಾಗಿ ಕಡೇ ಪಕ್ಷ ನಿಮ್ಮ ಮನೆಯ ನಾಯಿಯಾದರೂ ಸತ್ತಿದೆಯೇ? ಹಾಗಿದ್ದರೂ ಅವರು ದೇಶಭಕ್ತರು ಎಂದು ಹೇಳಿಕೊಳ್ಳುತ್ತಾರೆ. ನಾವೇನಾದರೂ ಮಾತನಾಡಿದ್ರೆ ನಮ್ಮನ್ನು ದೇಶದ್ರೋಹಿ ಎಂದು ಕರೆಯುತ್ತಾರೆ ಎಂದು ಟೀಕೆ ಮಾಡಿದರು.

ಅಲ್ಲದೇ ಚೀನಾದೊಂದಿಗಿನ ಗಡಿ ಘರ್ಷಣೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದಿದ್ದಕ್ಕಾಗಿ ಖರ್ಗೆ , ಬಿಜೆಪಿ ಸರ್ಕಾರ ಹೊರನೋಟಕ್ಕೆ ಸಿಂಹದಂತೆ ಮಾತನಾಡುತ್ತಾರೆ. ಆದರೆ ಒಳಗೆ ಇಲಿಯಂತೆ ವರ್ತಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ. ಖರ್ಗೆಯವರ ಈ ಹೇಳಿಕೆಗಳಿಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿದ್ದಲ್ಲದೆ, ಸಂಸತ್ತಿನಲ್ಲಿ ಅಧಿವೇಶನ ಪ್ರಾರಂಭವಾದ ತಕ್ಷಣ ಕ್ಷಮೆಯಾಚನೆಗೆ ಒತ್ತಾಯಿಸಿದೆ.

ಅಲ್ವಾರ್‌ನಲ್ಲಿ ನಿಂದನಾತ್ಮಕ ಭಾಷೆ ಬಳಸಿರುವುದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷಮೆ ಕೋರಬೇಕು ಎಂದು ರಾಜ್ಯಸಭೆಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಆಗ್ರಹಿಸಿದ್ದಾರೆ.

ಈ ಮಧ್ಯೆ, ಕ್ಷಮೆಯಾಚನೆಯ ಬೇಡಿಕೆಯನ್ನು ವ್ಯಂಗ್ಯವಾಡಿದ ಖರ್ಗೆ, ನಾನು ಇಲ್ಲಿ ಪುನರಾವರ್ತಿಸಿದರೆ, ಈ ಜನರಿಗೆ ತುಂಬಾ ಕಷ್ಟವಾಗುತ್ತದೆ. ಏಕೆಂದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕ್ಷಮೆಯಾಚಿಸಿದವರು, ಈಗ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕ್ಷಮೆಯಾಚಿಸಲು ಕೇಳುತ್ತಿದ್ದಾರೆ. ‘ಭಾರತ್ ತೋಡೊ (ವಿಭಜಿತ ಭಾರತ) ಯಾತ್ರೆ’ ನಡೆಸುತ್ತಿದೆ ಎಂದು ಹೇಳಿದರು. ಆಗ ನಾನು ಹೇಳಿದ್ದು ಕಾಂಗ್ರೆಸ್ ಯಾವಾಗಲೂ ಭಾರತ್ ಜೋಡೋ (ಭಾರತವನ್ನು ಒಂದುಗೂಡಿಸುವ) ಕೆಲಸ ಮಾಡಿದೆ. ಇದಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ಕೊಟ್ಟರು. ನೀವು ಏನು ಮಾಡಿದ್ದೀರಿ? ದೇಶಕ್ಕಾಗಿ ಯಾರು ತ್ಯಾಗ ಮಾಡಿದ್ದಾರೆಂದು ನಿಮಗೆ ತಿಳಿದಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಟೀಕೆ ಮಾಡಿದ್ದಾರೆ.

ಖರ್ಗೆ ಮಾತಿಗೆ ಮತ್ತೆ ತಿರುಗೇಟು ನೀಡಿದ ಪಿಯೂಷ್‌ ಗೋಯಲ್,ಅವರಿಗೆ ಕಾಂಗ್ರೆಸ್ ಇತಿಹಾಸ ನೆನಪಿಲ್ಲ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್‌ನಿಂದಾಗಿ ಜಮ್ಮು ಮತ್ತು ಕಾಶ್ಮೀರ ಯಾವ ಸ್ಥಿತಿಯಲ್ಲಿತ್ತು, ಪಾಕಿಸ್ತಾನದ ಬೆದರಿಕೆ, ಚೀನಾದ ಆಕ್ರಮಣ, ಬಿ.ಆರ್ ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗಾದ ಅವಮಾನ ಅವರಿಗೆ ನೆನಪಿಲ್ಲ ಎಂದು ಟೀಕಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!