ಒಟ್ಟಿಗೆ ಕೂರುವುದಕ್ಕೆ ನಿರ್ಬಂಧ: ವಿದ್ಯಾರ್ಥಿಗಳ ತೊಡೆ ಮೇಲೆ ಕುಳಿತು ಪ್ರತಿಭಟಿಸಿದ ವಿದ್ಯಾರ್ಥಿನಿಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳುವುದನ್ನು ತಪ್ಪಿಸಲು ಬಸ್‌ ಸ್ಟಾಂಡ್‌ ನಲ್ಲಿ ಸೀಟ್‌ಗಳನ್ನೇ ಬೇರ್ಪಡಿಸಿದ್ದಕ್ಕೆ ಪ್ರತಿಯಾಗಿ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಆ ಸೀಟುಗಳಲ್ಲಿ ಒಬ್ಬರ ತೊಡೆಯ ಮೇಲೆ ಒಬ್ಬರು ಕುಳಿತು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಕೇರಳದ ತಿರುವನಂತಪುರದ ಇಂಜಿನಿಯರಿಂಗ್‌ ಕಾಲೇಜಿನ (ಸಿಇಟಿ)  ಹೊರಗಿನ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಈ  ನಿಲ್ದಾಣದಲ್ಲಿದ್ದ ಉದ್ದನೆಯ ಸೀಟನ್ನು ಒಬ್ಬರು ಮಾತ್ರವೇ ಕೂರುವಂತೆ  ಮೂರು ಆಸನಗಳಾಗಿ ಕತ್ತರಿಸಲಾಗಿತ್ತು. ಆರಂಭದಲ್ಲಿ ಇದಕ್ಕೆ ಕಾರಣವೇನೆಂದು ವಿದ್ಯಾರ್ಥಿಗಳಿಗೆ ತಿಳಿದಿರಲಿಲ್ಲ. ಆದರೆ,  ಹುಡುಗ- ಹುಡುಗಿಯರು ಒಟ್ಟಿಗೆ ಕುಳಿತುಕೊಳ್ಳುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಯುತ್ತಿದ್ದಂತೆ, ಕಾಲೇಜಿನ ಕೆಲ ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ವಿದ್ಯಾರ್ಥಿನಿಯರು ಹುಡುಗರ ಮಡಿಲಲ್ಲಿ ಕುಳಿತು ಪ್ರತಿಭಟಿಸಿದ್ದಾರೆ. “ಹತ್ತಿರದಲ್ಲಿ ಕುಳಿತುಕೊಳ್ಳಲು ನಿಷೇಧಿಸಿದ್ದೀರಿ ಸರಿ.. ಆದರೆ ಮಡಿಲಲ್ಲಿ ಕುಳಿತುಕೊಳ್ಳಬಹುದಲ್ಲವೇ?” ಎಂಬ ಟಿಪ್ಪಣಿಯನ್ನು ಬರೆದು ಈ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿವೆ. ವಿ.ಟಿ.ಬಲರಾಮ್ ಮತ್ತು ಕೆ.ಎಸ್. ಶಬರಿನಾಧನ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.
ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಸಹ ವಿದ್ಯಾರ್ಥಿಗಳನ್ನು ಬೆಂಬಲಿಸಿದ್ದಾರೆ.  ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ವೈಫೈ ಸೌಲಭ್ಯವಿರುವ,  ವಿದ್ಯಾರ್ಥಿಗಳ ನಡುವೆ ಲಿಂಗ ತಾರತಮ್ಯ ನಿರ್ಬಂಧಿಸಿದ ಹೊಸ ಬಸ್ ನಿಲ್ದಾಣವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!