ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ಮತ್ತು ಕಾಲಿವುಡ್ನಲ್ಲಿ ನಾಯಕಿಯಾಗಿ ಅಭಿನಯಿಸಿ ಖ್ಯಾತಿ ಪಡೆದಿರುವ ಡಿಂಪಲ್ ಹಯಾತಿ ಸಂಯಮ ಕಳೆದುಕೊಂಡು ವಿವಾದವೊಂದಕ್ಕೆ ಗುರಿಯಾಗಿದ್ದಾರೆ.
ಹಯಾತಿ ಅವರು ಜುಬಿಲಿ ಹಿಲ್ಸ್ನ ಹುಡಾ ಎನ್ಕ್ಲೇವ್, ಜರ್ನಲಿಸ್ಟ್ ಕಾಲನಿಯಲ್ಲಿರುವ ಎಸ್ಕೆಆರ್ ಅಪಾರ್ಟ್ಮೆಂಟ್ನಲ್ಲಿ ತನ್ನ ಫ್ರೆಂಡ್ ವಿಕ್ಟರ್ ಡೇವಿಡ್ ಜತೆ ವಾಸವಿದ್ದು, ಅದೇ ಅಪಾರ್ಟ್ಮೆಂಟ್ನಲ್ಲಿ ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಕೂಡ ನೆಲೆಸಿದ್ದಾರೆ. ಅಂದಹಾಗೆ ರಾಹುಲ್ ಹೆಗ್ಡೆ ಅವರು ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರು ಪಾರ್ಕಿಂಗ್ ವಿಚಾರದಲ್ಲಿ ಹಯಾತಿ ಮತ್ತು ಸ್ನೇಹಿತ ಐಪಿಎಸ್ ಅಧಿಕಾರಿಯ ಜತೆ ಜಗಳಕ್ಕೆ ಇಳಿದಿದ್ದರು. ಐಪಿಎಸ್ ಅಧಿಕಾರಿಗೆ ಗೊತ್ತುಪಡಿಸಲಾದ ಪಾರ್ಕಿಂಗ್ ಜಾಗದಲ್ಲಿ ಹಯಾತಿ ತನ್ನ ಕಾರು ಪಾರ್ಕ್ ಮಾಡುತ್ತಿದ್ದರು ಎಂಬ ಆರೋಪ ಇದೆ. ಅಲ್ಲದೆ ಈ ವಿಚಾರವಾಗಿ ಅನೇಕ ಬಾರಿ ಕ್ಯಾತೆ ತೆಗೆದಿದ್ದಾರೆ ಅಂತಲೂ ಐಪಿಎಸ್ ಅಧಿಕಾರಿಯ ಕಾರು ಚಾಲಕ ಹೇಳಿದ್ದಾರೆ.
ಪ್ರತಿ ಬಾರಿ ಪಾರ್ಕಿಂಗ್ ಏರಿಯಾದಿಂದ ಹೊರ ಹೋಗುವಾಗ ಹಯಾತಿ ಅಧಿಕಾರಿಯ ಕಾರನ್ನು ಕಾಲಿನಿಂದ ಒದೆಯುತ್ತಿದ್ದರು ಎಂದು ಕಾರು ಚಾಲಕ ಆರೋಪಿಸಿದ್ದಾರೆ. ಮೇ 14ರಂದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಅಂದು ಹಯಾತಿ ಅವರು ಉದ್ದೇಶಪೂರ್ವಕವಾಗಿಯೇ ಅಧಿಕಾರಿಯ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಲ್ಲದೆ ತುಂಬಾ ಆಕ್ರಮಣಕಾರಿ ವರ್ತನೆ ತೋರಿದರು ಎಂಬ ಆರೋಪ ಕೂಡ ಇದೆ.
ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಅವರು ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಂಪಲ್ ಹಯಾತಿ ಮತ್ತು ಆಕೆಯ ಸ್ನೇಹಿತನ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ನೀಡಿದ್ದು, ಹಯಾತಿ ಇದೀಗ ಬಂಧನದ ಭೀತಿಯಲ್ಲಿದ್ದಾರೆ.