ಹೊಸದಿಗಂತ ವರದಿ,ಮಂಗಳೂರು:
ಮಂಗಳೂರು: ಮಂಗಳೂರಿನ ಉಳ್ಳಾಲ ಮತ್ತೆ ಸುದ್ದಿಯಾಗಿದೆ. ಇಲ್ಲಿನ ಕುಟುಂಬವೊಂದು ಐಸಿಎಸ್ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಈ ಹಿಂದೆ ಎನ್‌ಐಎ ದಾಳಿ ನಡೆಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದು, ಸೋಮವಾರ ಮತ್ತೆ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಮಾಜಿ ಶಾಸಕ ಬಿ.ಎಂ.ಇದಿನಬ್ಬ ಅವರ ಪುತ್ರ ಬಿ.ಎಂ.ಬಾಷಾ ಅವರ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಮನೆಗೆ ದಾಳಿಯಾಗಿದ್ದು, ಇದಿನಬ್ಬ ಅವರ ಮೊಮ್ಮಗ ಅನಾಸ್ ಅಬ್ದುಲ್ ರಹಿಮಾನ್‌ನ ಪತ್ನಿ ದೀಪ್ತಿ ಮಾರ್ಲ ಯಾನೆ ದೀಪ್ತಿ ಮರಿಯಂಳನ್ನು ಬಂಧಿಸಲಾಗಿದೆ.
ಎನ್‌ಐಎ ಡಿಎಸ್‌ಪಿ ಕೃಷ್ಣ ಕುಮಾರ್, ಅಜಯ್ ಸಿಂಗ್ ಮತ್ತು ಮೋನಿಕಾ ದಿಕ್ವಾಲ್ ನೇತೃತ್ವದ ತಂಡ ದಾಳಿ ನಡೆಸಿ ದೀಪ್ತಿಯನ್ನು ಬಂಧಿಸಿದೆ.
ಬಾಷಾ ಕುಟುಂಬ ಐಸಿಸ್ ಜೊತೆ ನಂಟು ಹೊಂದಿರುವುದು ಈ ಹಿಂದೆಯೇ ದೃಢವಾಗಿತ್ತು. ಇದನ್ನು ಖಚಿತಪಡಿಸಿಕೊಂಡಿದ್ದ ಎನ್‌ಐಎ ತಂಡ ೨೦೨೧ರ ಆಗಸ್ಟ್‌ನಲ್ಲಿ ಬಾಷಾ ಮನೆಗೆ ದಾಳಿ ನಡೆಸಿ ಸಾಕಷ್ಟು ಮಾಹಿತಿ ಕಲೆ ಹಾಕಿತ್ತು. ಬಾಷಾ ಅವರ ಕಿರಿಯ ಪುತ್ರ ಅನಾಸ್ ಅಬ್ದುಲ್ ರಹಿಮಾನ್ ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಆರೊಪದಲ್ಲಿ ಆತನನ್ನು ಬಂಧಿಸಲಾಗಿತ್ತು. ಈತನ ಪತ್ನಿ ದೀಪ್ತಿ ಮರಿಯಂ ಕೂಡ ಐಸಿಎಸ್ ನಂಟು ಹೊಂದಿದ್ದ ಆರೋಪದಲ್ಲಿ ಎನ್‌ಐಎ ತಂಡ ಬಂಧಿಸಿ ವಿಚಾರಣೆಗೊಳಪಡಿಸಿದೆ.