ಡಿಕೆಶಿ ನೇತೃತ್ವದ ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆ ಸಾಧಿಸಲಿರುವುದು ಏನನ್ನು?

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ರಾಜ್ಯದಲ್ಲಿ ಘೋಷಿತ ವಾರಾಂತ್ಯ ಕರ್ಫ್ಯೂ ನಡುವೆ ಡಿ. ಕೆ ಶಿವಕುಮಾರ ನೋತೃತ್ವದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಜನವರಿ 9ರಿಂದ ಪ್ರಾರಂಭವಾಗಲಿದೆ.

ಮೇಕೆದಾಟು ಯೋಜನೆಗೆ ಬೆಂಬಲವಾಗಿ ಮೇಕೆದಾಟುವಿನಿಂದ ಬೆಂಗಳೂರು ವರೆಗೆ 150 ಕಿ.ಮೀ. ಪಾದಯಾತ್ರೆ ಎಂಬುದು ಮೇಲ್ನೋಟದ ಕಾರ್ಯಸೂಚಿ. ಮೇಕೆದಾಟು ಯೋಜನೆ ಪರವಾಗಿ ಕಾಂಗ್ರೆಸ್ ಇದೆ, ಬಿಜೆಪಿಯಿಂದಲೇ ವಿಳಂಬ ಎಂಬ ವಾದ ಮುಂದಿಡುವುದು ರಾಜಕೀಯ ಕಾರ್ಯಸೂಚಿ. ಇದು ಕನಕಪುರ, ರಾಮನಗರ ಮತ್ತು ಬಿಡದಿ ಮೂಲಕ ಸಾಗಿ ರಾಜಧಾನಿಯಲ್ಲಿ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆ ಸುತ್ತ ಕೆಲವು ಪ್ರಶ್ನೆಗಳು ತೆರೆದುಕೊಂಡಿವೆ.

ತಮಿಳುನಾಡಿನಲ್ಲಿರುವುದು ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ, ಹಾಗಾದರೆ ಕಾಂಗ್ರೆಸ್ ಪ್ರತಿಭಟನೆ ಯಾರ ವಿರುದ್ಧ?

ಕಾಂಗ್ರೆಸ್ ಸೇರಿದಂತೆ ತಮಿಳುನಾಡಿನ ಯಾವುದೇ ಪಕ್ಷಗಳೂ ಮೇಕೆದಾಟು ಯೋಜನೆ ಒಪ್ಪಿಕೊಳ್ಳುವುದಿಲ್ಲ. ಆದರೆ ಸದ್ಯದಲ್ಲಿರುವುದು ಕಾಂಗ್ರೆಸ್ ಪ್ರಣೀತ ಯುಪಿಎ ಪಾಳೆಯದ ಡಿಎಂಕೆ ಮೈತ್ರಿಕೂಟ. ಹೀಗಿರುವಾಗ, ಕರ್ನಾಟಕದ ಕಾಂಗ್ರೆಸ್ ಪಾದಯಾತ್ರೆಗಿಂತ ತಮ್ಮ ಪಾಳೆಯದವರನ್ನೇ ಮನವೊಲಿಸಿದರೆ ಯೋಜನೆ ಸುಸೂತ್ರವಾಗಬಹುದಲ್ಲ? ಆಡಳಿತಾರೂಢ ರಾಜ್ಯ ಬಿಜೆಪಿಯೂ ಮೇಕೆದಾಟು ಯೋಜನೆ ಮಾಡುವುದಕ್ಕೆ ಬದ್ಧವಾಗಿದೆ.

ಕಾಂಗ್ರೆಸ್ಸಿನ ವಾದವೆಂದರೆ- ಕೇಂದ್ರದಲ್ಲಿರುವ ಬಿಜೆಪಿ ಕರ್ನಾಟಕದ ಪರವಿಲ್ಲ ಎಂಬುದು. ವಾಸ್ತವ ಏನೆಂದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಕಾಂಗ್ರೆಸ್ಸೇ ಇದ್ದರೂ ಯಾವ ರಾಜ್ಯದ ಕುರಿತೂ ನಿಲುವು ತೆಗೆದುಕೊಳ್ಳಲು ಬರುವುದಿಲ್ಲ.

ಮೇಕೆದಾಟು ಕುರಿತ ವಾಸ್ತವಾಂಶಗಳಿಗೆ ನೀವು ಈ ವಿಡಿಯೋ ನೋಡಬಹುದು.

ಇದು ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗೋದಕ್ಕೆ ಪೈಪೋಟಿಯೇ?

2023ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯನವರಾ, ಡಿ. ಕೆ. ಶಿವಕುಮಾರ್ ಅವರಾ? ಈ ಪ್ರಶ್ನೆಗೆ ಉತ್ತರವನ್ನು ತಮ್ಮ ಪರವಾಗಿಸಿಕೊಳ್ಳುವುದಕ್ಕೆಂದೇ ಡಿಕೆಶಿ ಅವರ ಈ ಪಾದಯಾತ್ರೆ ಅನ್ನೋದು ರಾಜಕೀಯ ವಲಯದ ವಿಶ್ಲೇಷಣೆ.

ಏತನ್ಮಧ್ಯೆ, ಮೇಕೆದಾಟುವಿನಿಂದ ಬೆಂಗಳೂರಿಗೆ ಯೋಜಿತ ಪಾದಯಾತ್ರೆ ಪ್ರತಿಪಕ್ಷ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಸಮಾಧಾನಗೊಳಿಸಿರುವಂತೆ ಕಾಣುತ್ತಿದೆ. ಶಿವಕುಮಾರ್ ಅವರ ಆಪ್ತವಲಯ ಎನಿಸಿರುವವರು ಮೈಸೂರು ಪ್ರದೇಶಕ್ಕೆ ಕಾಲಿಡುತ್ತಿರುವುದು ಕಾಂಗ್ರೆಸ್ ನಾಯಕರನ್ನು ಕಸಿವಿಸಿಗೊಳಿಸಿದೆ. ಅಂತಿಮವಾಗಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರೊಂದಿಗೆ ಪಾದಯಾತ್ರೆ ಮುನ್ನಡೆಸಲು ಒಪ್ಪಿಕೊಂಡಿದ್ದಾರೆ.

ಜೆಡಿಎಸ್‌ನಿಂದ ಪಾದಯಾತ್ರೆಗೆ ಟೀಕೆ

ಕರ್ನಾಟಕ ಮುಖ್ಯಮಂತ್ರಿ ಆಗುವ ಕನಸನ್ನು ನನಸು ಮಾಡಿಕೊಳ್ಳಲು ಡಿಕೆಶಿ ಈ ಪಾದಯಾತ್ರೆಯನ್ನು ಸಂಘಟಿಸಿದ್ದಾರೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದು, ಶಿವಕುಮಾರ್ ಈ ಪ್ರದೇಶದಲ್ಲಿ ತಮ್ಮ ಪ್ರಮುಖ ಪ್ರತಿಸ್ಪರ್ಧಿ ಜೆಡಿಎಸ್ ಅನ್ನು ಕೂಡ ಗುರಿಯಾಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಪಾದಯಾತ್ರೆಯನ್ನು ಟೀಕಿಸಿದ್ದಾರೆ. ಅಧಿಕಾರದಲ್ಲಿದ್ದಾಗ ಅನುಷ್ಠಾನಗೊಳಿಸದ ಕಾಂಗ್ರೆಸ್ ಈಗ ಪಾದಯಾತ್ರೆ ನಡೆಸುತ್ತಿರುವುದು ಯಾಕೆಂದು ಪ್ರಶ್ನಿಸಿದ್ದಾರೆ. ಈವರೆಗೆ ಯಾವುದೇ ಸಂಘಟನೆಗಳು ಕೂಡ ಕಾಂಗ್ರೆಸ್‌ನ ಪಾದಯಾತ್ರೆಯನ್ನು ಬೆಂಬಲಿಸದಿರುವುದು, ಕನ್ನಡ ಪರ ಸಂಘಟನೆಗಳು ಮತ್ತು ರೈತರ ಬೆಂಬಲವನ್ನು ನಿರೀಕ್ಷಿಸಿ ಪಾದಯಾತ್ರೆ ಮಾಡಲು ಹೊರಟ ಕಾಂಗ್ರೆಸ್‌ಗೆ ಹಿನ್ನಡೆಯಾದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!