9 ದಿನದಲ್ಲಿ 19 ಲಕ್ಷ ಭಕ್ತರಿಂದ ಹಾಸನಾಂಬೆಯ ದರುಶನ: ಇದು ‘ಶಕ್ತಿ ಯೋಜನೆ’ಯ ಪರಿಣಾಮ ಎಂದ ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನಾಂಬೆಯ 9 ದಿನಗಳ ಉತ್ಸವದಲ್ಲಿ 19 ಲಕ್ಷ ಭಕ್ತಾದಿಗಳು ದರುಶನ ಪಡೆದಿದ್ದಾರೆ. 9 ಕೋಟಿ ರೂಪಾಯಿ ಲಾಡು ಪ್ರಸಾದ ಮತ್ತು ಟಿಕೆಟ್‌ನಿಂದ ಸಂಗ್ರಹವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಹರಿದುಬಂದಿರುವುದು ‘ಶಕ್ತಿ ಯೋಜನೆ’ಯ ಪರಿಣಾಮ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

24 ಗಂಟೆ ದೇವಿಯ ದರುಶನದ ವ್ಯವಸ್ಥೆ ಅದ್ಬುತವಾಗಿತ್ತು. ಬೀದರ್‌ನಿಂದ ಚಾಮರಾಜನಗರದ ವರೆಗೆ ಬಳ್ಳಾರಿಯಿಂದ ಕೋಲಾರದ ವರೆಗೆ ಮಾತ್ರವಲ್ಲ ವಿವಿಧ ರಾಜ್ಯಗಳ ಭಕ್ತರು, ಬೇರೆ ದೇಶಗಳ ಭಕ್ತರೂ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದರು. ಉಚಿತ ಬಸ್ ಪ್ರಯಾಣ ಇರುವುದರಿಂದ ಇಷ್ಟು ಭಕ್ತರು ಬರಲು ಸಾಧ್ಯವಾಗಿದೆ. ಇದನ್ನು ನೋಡಿ ಸರ್ಕಾರಕ್ಕೆ ಹೆಮ್ಮೆಯಾಗುತ್ತಿದೆ. ಸಾರ್ಥಕ ಭಾವ ಮೂಡುತ್ತಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆ ಮಹಿಳೆಯರ ಶಕ್ತಿ ವೃದ್ಧಿ ಮಾಡಿರುವುದರ ಜತೆಗೆ ನಮ್ಮ ಧಾರ್ಮಿಕ ಶಕ್ತಿಯನ್ನೂ ಹೆಚ್ಚಿಸಿದೆ ಎಂಬುದು ಸಾಕ್ಷಿ. ಜೊತೆಗೆ ಹಾಸನಾಂಬೆ ದರುಶನಕ್ಕೆ ಜಿಲ್ಲಾಡಳಿತ ಅಷ್ಟು ಸಮರ್ಪಕ ವ್ಯವಸ್ಥೆ ಮಾಡಿದೆ. 9 ದಿನಗಳಲ್ಲಿ 19 ರಿಂದ 20 ಲಕ್ಷ ಜನ ದೇವಿಯ ದರುಶನ ಪಡೆದಿದ್ದಾರೆ ಎಂಬುದು ಸಣ್ಣ ವಿಚಾರವಲ್ಲ ಎಂದರು.

ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ, ಬಹುತೇಕ ಉತ್ಸವ ಯಶಸ್ವಿಯಾಗಿದೆ‌. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಶ್ರಮಿಸಿದ ಪೌರ ಕಾರ್ಮಿಕರು,‌ ಪೊಲೀಸರು, ಕಂದಾಯ ಅಧಿಕಾರಿಗಳು ಹಾಗೂ ಇತರ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರು, ಹಾಸನದ ನಾಗರಿಕರು, ಎಲ್ಲ ಭಕ್ತರಿಗೂ ಕೃತಜ್ಞರಾಗಿದ್ದೇವೆ ಎಂದು ತಿಳಿಸಿದರು.

ಇಷ್ಟು ದೊಡ್ಡ ಸಂಖ್ಯೆಯ ಭಕ್ತರ ಭೇಟಿ ಐತಿಹಾಸಿಕ ದಾಖಲೆ. ಎಲ್ಲರಿಗೂ ನಾವು ವೈಯಕ್ತಿಕವಾಗಿ, ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳೂ ನಡೆಯದಂತೆ ಸರ್ಕಾರ ಸೂಕ್ತ ಮುನ್ನೆಚ್ಚರಿಕ ಕೈಗೊಳ್ಳಲಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!