Friday, June 9, 2023

Latest Posts

ಬಸ್‌ ಮೇಲಿಂದಲೇ ಹಣ ಎಸೆದ ಡಿ.ಕೆ. ಶಿವಕುಮಾರ್: ಕಾಂಗ್ರೆಸ್‌ ನಾಯಕನ ದರ್ಪಕ್ಕೆ ಜನರ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್‌ ಬಸ್‌ ಮೇಲಿಂದಲೇ ಜಾನಪದ ಕಲಾವಿದರಿಗೆ ಹಣವನ್ನು ಎರಚುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ಮಂಡ್ಯ ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೇವಿನಹಳ್ಳಿ ಗ್ರಾಮದಲ್ಲಿ ಇಂದು ಅದ್ಧೂರಿಯಾಗಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಅಭ್ಯರ್ಥಿ ರಮೇಶ್‌ ಬಂಡಿಸಿದ್ದೇಗೌಡ ಅವರ ಪರವಾಗಿ ಬೇವಿನಹಳ್ಳಿಯಲ್ಲಿ ಬಸ್‌ ಮೇಲಿಂದಲೇ ರೋಡ್‌ ಶೋ ಮೂಲಕ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಬೇವಿನಹಳ್ಳಿ ಬಸ್‌ ನಿಲ್ದಾಣದ ಬಳಿ ಹಲವು ಜಾನಪದ ಕಲಾತಂಡಗಳು ಪೂಜಾಕುಣಿತ ಹಾಗೂ ಪಟ ಕುಣಿತದ ದೇವರು ಹೊತ್ತುಕೊಂಡು ಕುಣಿಯುತ್ತಿದ್ದವು. ಇದನ್ನು ನೊಡಿದ ಡಿ.ಕೆ. ಶಿವಕುಮಾರ್‌ ಬಸ್‌ ಮೇಲಿಂದಲೇ ನೋಟಿನ ಕಂತೆಯನ್ನು ತೆರೆದು ಕಲಾ ತಂಡಗಳತ್ತ ಎಸೆದು ದರ್ಪ ತೋರಿದ್ದಾರೆ.

ಬಸ್‌ ಮೇಲಿಂದಲೇ ರೋಡ್‌ ಶೋ ಮೂಲಕ ಜನರತ್ತ ಕೈಬೀಸಿ ಮಾತನಾಡುತ್ತಾ ಸಾಗುತ್ತಿದ್ದ ವೇಳೆ ಡಿ.ಕೆ. ಶಿವಕುಮಾರ್‌ 500 ರೂ. ಮುಖಬೆಲೆಯ ಹಲವು ನೋಟುಗಳನ್ನು ಎರಚಿದ್ದಾರೆ. ಜಾನಪದ ಕಲಾವಿದರಿಗೆ ಈ ಹಣ ಎರಚಲಾಗಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದರೂ, ಕಲಾವಿದರು ಪೂಜಾ ಕುಣಿತದ ದೇವರು ಹೊತ್ತುಕೊಂಡಿದ್ದು, ಇದು ಕಾಂಗ್ರೆಸ್‌ ಕಾರ್ಯಕರ್ತರ ಪಾಲಾಗಿದೆ ಎಂದು ಸ್ಥಳೀಯರು ಹಾಗೂ ಕಲಾತಂಡದ ಸದಸ್ಯರು ಹೇಳಿದ್ದಾರೆ. ಆದರೆ, ಕಲಾವಿದರ ಮೇಲೆ ಹಣವನ್ನು ಎರಚಿ ದರ್ಪ ತೋರಿಸಿದ ಡಿ.ಕೆ. ಶಿವಕುಮಾರ್‌ ಅವರ ಮೇಲೆ ಸ್ಥಳೀಯ ಮತದಾರರು ಆಕ್ರೋಶ ಹೊರಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!