ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಸ್ತೂರಿರಂಗನ್ ವರದಿ ಕುರಿತು ರೈತರು, ಸಾರ್ವಜನಿಕರು ಹಾಗೂ ತಜ್ಞರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀರ್ಥಹಳ್ಳಿಯಲ್ಲಿ ನಡೆಸಿದ ನೇರ ಸಂವಾದ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗಾಯನ ವಿಚಾರ ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.
ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಿದ್ದಕ್ಕೆ ಶಿವಮೊಗ್ಗ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿ, ಸಂಪೂರ್ಣ ಗೀತೆ ಹಾಡಲು ಅವಕಾಶ ನೀಡಬೇಕು ಎಂದು ವೇದಿಕೆಯಲ್ಲೇ ಆಗ್ರಹಿಸಿದರು.
ಭಾವನೆಗಳಿಗೆ ಧಕ್ಕೆ ಉಂಟಾಗಿದೆ
ಮೈಕ್ ಬಳಿಗೆ ತೆರಳಿದ ಚನ್ನಬಸಪ್ಪ, ಎರಡು ಚರಣಗಳಿಗಷ್ಟೇ ಸೀಮಿತಗೊಳಿಸಿರುವುದರಿಂದ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ವೇದಿಕೆ ಬಳಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದು ವರದಿಯಾಗಿದೆ.
ಇದನ್ನೂ ಓದಿ:
ಯಾಕೆ ನನ್ನನ್ನು ಕೆಣಕುತ್ತಿದ್ದಾರೆ ಗೊತ್ತಿಲ್ಲ
ಘಟನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಿಂದಿನಿಂದಲೂ ಎರಡು ಚರಣಗಳನ್ನು ಹಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. “ಚನ್ನಬಸಪ್ಪ ಯಾಕೆ ನನ್ನನ್ನು ಕೆಣಕುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನಾನು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇನೆ, ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ” ಎಂದು ಹೇಳಿದ ಅವರು, ಕಾರ್ಯಕ್ರಮದಲ್ಲಿ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸುವ ಅಗತ್ಯವಿಲ್ಲ ಎಂಬ ನಿಲುವು ವ್ಯಕ್ತಪಡಿಸಿದರು.
ಕಸ್ತೂರಿರಂಗನ್ ವರದಿಯಂತಹ ಪ್ರಮುಖ ವಿಷಯದ ಕುರಿತು ರೈತರು ಮತ್ತು ಸ್ಥಳೀಯರ ಅಭಿಪ್ರಾಯ ಆಲಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ವಿಚಾರ ಮುನ್ನೆಲೆಗೆ ಬಂದಿರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.



