ಪಂಜಾಬಿನಲ್ಲಿ ಪ್ರಧಾನಿ ಭದ್ರತೆಯಲ್ಲಾದ ಲೋಪ- ‘ಇಂಡಿಯಾ ಟುಡೆ’ ತನಿಖಾ ವರದಿ ಏನು ಹೇಳ್ತಿದೆ ಗೊತ್ತೇ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ವಾಹನ ಜನವರಿ 5ರಂದು ಪಂಜಾಬಿನ ಫಿರೋಜ್ಪುರದಲ್ಲಿ ರಸ್ತೆ ಮಧ್ಯೆ ನಿಲ್ಲಬೇಕಾಗಿ ಬಂದಿದ್ದನ್ನು ಜಗತ್ತೇ ನೋಡಿದೆ. ಆದರೆ, ಇಲ್ಲಿ ಯಾವ ಭದ್ರತಾ ಲೋಪಗಳೂ ಆಗಿಲ್ಲ ಎಂಬುದು ಪಂಜಾಬ್ ಸರ್ಕಾರದ ನಿಲುವು. ಇದೀಗ ಇಂಡಿಯಾ ಟುಡೆ ಪ್ರಕಟಿಸಿರುವ ತನಿಖಾ ವರದಿ ಹೇಳುತ್ತಿದೆ- ಪ್ರತಿಭಟನೆಗಳು ನಡೆಯುತ್ತಿರುವ ಬಗ್ಗೆ ಹಾಗೂ ಪ್ರಧಾನಿ ಪ್ರಯಣಿಸುವ ರಸ್ತೆಯನ್ನು ಪ್ರತಿಭಟನಾಕಾರರು ಆಕ್ರಮಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮೊದಲೇ ಗೊತ್ತಿದ್ದರೂ ಅವರದನ್ನು ತೆರವುಗೊಳಿಸಲಿಲ್ಲ.
ಕೆಲವು ಪೊಲೀಸ್ ಅಧಿಕಾರಿಗಳು, ಘಟನೆ ನಡೆದ ಸ್ಥಳಕ್ಕೆ ಹತ್ತಿರದಲ್ಲಿದ್ದ ಅಂಗಡಿಕಾರ ಹಾಗೂ ಹತ್ತಿರದ ಗ್ರಾಮದ ಮುಖ್ಯಸ್ಥ ಇವರನ್ನೆಲ್ಲ ಮಾತನಾಡಿಸಿ ಅವತ್ತು ನಡೆದಿದ್ದೇನು ಎಂಬ ಬಗ್ಗೆ ಇಂಡಿಯಾ ಟುಡೆ ವರದಿ ಮಾಡಿದೆ.

ಪೊಲೀಸರಿಂದ ತಿಳಿದುಬಂದಿದ್ದು
ತಾವು ವರದಿಗಾರರು ಎಂಬುದನ್ನು ಮರೆಮಾಚಿ ಇಂಡಿಯಾ ಟುಡೆ ಪ್ರತಿನಿಧಿಗಳು ಪೊಲೀಸರಿಂದ ಸಂಗ್ರಹಿಸಿರುವ ಮಾಹಿತಿ ಹೀಗಿದೆ- “ಪ್ರಧಾನಿ ಪ್ರಯಾಣಿಸುವ ಮಾರ್ಗ ಹೆಲಿಕಾಪ್ಟರಿನಿಂದ ರಸ್ತೆಗೆ ಬದಲಾಗುತ್ತಲೇ ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್ ಸಂದೇಶ ಕಳಿಸಿತ್ತು. ಆ ಪ್ರಕಾರ ರಸ್ತೆಯನ್ನು ಸೀಲ್ ಮಾಡುವುದು ಮತ್ತು ಪ್ರಧಾನಿ ಸಂಚಾರಕ್ಕೆ ಮುಕ್ತವಾಗಿರಿಸುವುದು ಪೊಲೀಸರ ಜವಾಬ್ದಾರಿ ಆಗಿತ್ತು. ಆ ಮಾರ್ಗದಲ್ಲಿ ಪ್ರತಿಭಟನಕಾರರು ಪ್ರವೇಶಿಸಿರುವುದು ಹಾಗೂ ರಸ್ತೆಯ ಸಂಚಾರಕ್ಕೆ ತಡೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಯಿಂದ ಮೇಲಿನವರಿಗೆ ಮಾಹಿತಿಯೂ ರವಾನೆಯಾಗುತ್ತದೆ. ಅವರನ್ನು ಚದುರಿಸಲು ಬಲಪ್ರಯೋಗಿಸಬೇಕೆ ಎಂಬ ಪ್ರಶ್ನೆ ಬಂದಾಗ- ಚುನಾವಣೆ ಎದುರಿಗಿದೆ, ಬಲಪ್ರಯೋಗಿಸುವುದಕ್ಕೆ ಮೇಲಿನಿಂದ ಆರ್ಡರ್ ಬಂದಿಲ್ಲ ಎಂದು ಕೈಚೆಲ್ಲಲಾಗಿದೆ.”

ಅಂಗಡಿಕಾರ ಹೇಳಿದ್ದು
ಪ್ರಧಾನಿ ವಾಹನ ಸಿಕ್ಕಿಕೊಂಡಿದ್ದ ಮೇಲ್ಸೇತುವೆ ಶುರುವಾಗುವುದಕ್ಕೆ ಹತ್ತಿರದಲ್ಲೇ ಅವತ್ತು ಸಾರಾಯಿ ಅಂಗಡಿ ತೆಗೆದುಕೊಂಡಿತ್ತು. ಆ ಅಂಗಡಿಕಾರನನ್ನು ಮಾತನಾಡಿಸಿದಾಗ ಆತ ಹೇಳಿದ್ದು- ಇಲ್ಲಿರುವ ಯಾರಿಗೂ ಅಂಗಡಿಗಳನ್ನು ಮುಚ್ಚಬೇಕು ಎಂದು ಸೂಚನೆ ಬಂದಿರಲಿಲ್ಲ. ಅಲ್ಲದೇ ರಸ್ತೆಯನ್ನು ತಡೆಗೊಳಿಸಿದವರು ಸ್ಥಳೀಯ ಪರಿಚಿತ ಮುಖಗಳಾಗಿರಲಿಲ್ಲ, ಇವರೆಲ್ಲ ಹೊರಗಿನಿಂದ ಬಂದವರು ಎಂದೂ ಆ ಅಂಗಡಿಕಾರ ಹೇಳಿದ್ದಾನೆ. ವಾಸ್ತವದಲ್ಲಿ ಪ್ರಧಾನಿ ಸಂಚರಿಸುವ ದಾರಿ ಮಾರುಕಟ್ಟೆ ಪ್ರದೇಶವಾಗಿದ್ದರೆ ಅದಕ್ಕೆ ಮೊದಲೇ ನಿರ್ಬಂಧ ಹೇರಲಾಗುತ್ತದೆ, ಅದಾಗಿಲ್ಲ.

ಗ್ರಾಮದ ಮುಖ್ಯಸ್ಥನ ಅಭಿಪ್ರಾಯ
ನಿಚತ್ತರ್ ಸಿಂಗ್ ಎಂಬ ಗ್ರಾಮದ ಸರಪಂಚರನ್ನೂ ಇಂಡಿಯಾ ಟುಡೆ ಮಾತನಾಡಿಸಿದೆ. ಅವರು ಹೇಳಿದ್ದು- ರಸ್ತೆಯನ್ನು ಅಡ್ಡಗಟ್ಟಿದವರು ನಮ್ಮ ಸ್ಥಳೀಯರಲ್ಲ. ಆದರೆ, ಸ್ಥಳೀಯರೂ ಪ್ರತಿಭಟನೆಗೆ ಸೇರಿಕೊಳ್ಳಬೇಕು ಎಂದು ಪ್ರಧಾನಿ ವಾಹನ ಬರುವುದಕ್ಕೆ ಸ್ವಲ್ಪ ಮುಂಚೆ ಗುರುದ್ವಾರಾದ ಮೈಕುಗಳಿಂದ ಸಾರಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!