ರಾಜ್ಯಪಾಲರು ವಿಧಾನಸೌಧದ ಮೆಟ್ಟಿಲು ಹತ್ತಿದ್ದೇಕೆ ಸುದ್ದಿ ಗೊತ್ತೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ವಿಧಾನ ಮಂಡಲದ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಆರು ತಿಂಗಳ ಹಿಂದೆ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಥಾವರ್‌ಚಂದ್ ಗೆಹ್ಲೋಟ್ ಅವರು ಮೊದಲ ಬಾರಿಗೆ ರಾಜ್ಯದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
ಎರಡು ದಶಕಗಳ ನಂತರ ರಾಜ್ಯಪಾಲರು ವಿಧಾನಸೌಧದ ಮಹಾ ಮೆಟ್ಟಿಲುಗಳ ಮೂಲಕ ಜಂಟಿ ಅಧಿವೇಶನಕ್ಕೆ ಆಗಮಿಸುವ ಮೂಲಕ ಹಳೆಯ ಸಂಪ್ರದಾಯ ಪಾಲಿಸಿದರು. ಈ ನಡುವಿನ ವರ್ಷಗಳಲ್ಲಿ ರಾಜ್ಯಪಾಲರು ಲಿಫ್ಟ್ ಬಳಸಿ ಹೋಗಿದ್ದೇ ಹೆಚ್ಚಾಗಿತ್ತು. ಅದಕ್ಕೆ ಬೇರೆ ಬೇರೆ ಸಕಾರಣಗಳೂ ಇದ್ದವೆನ್ನಿ. ಈ ಬಾರಿ ವಿಧಾನಸೌಧದ ಭವ್ಯ ಮೆಟ್ಟಿಲುಗಳನ್ನು ಹತ್ತಿಯೇ ರಾಜ್ಯಪಾಲರು ಸದನಕ್ಕೆ ಆಗಮಿಸಿದರೆ ಚೆನ್ನಾಗಿರುತ್ತದೆ ಎಂದು ಮಾಡಿಕೊಂಡಿದ್ದ ಮನವಿಗೆ ರಾಜ್ಯಪಾಲರು ಸ್ಪಂದಿಸಿದ್ದಾಗಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಹಿಂದೆಯೇ ಮಾಹಿತಿ ಹಂಚಿಕೊಂಡಿದ್ದರು.
ಹಳೆಯ ಪರಂಪರೆ ಮುಂದುವರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮಹಾಮೆಟ್ಟಿಲುಗಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಸ್ವಾಗತಿಸಿದರು.
ಮೊದಲ ಬಾರಿ ರಾಜ್ಯದ ಉಭಯ ಸದನದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್ ಅವರು ರಾಜ್ಯ ಸರಕಾರದ ಸಾಧನೆಗಳು, ಯೋಜಿಸಿರುವ ಯೋಜನೆಗಳ ಬಗ್ಗೆ ವಿಸ್ತೃತ ನೋಟ ನೀಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಶೇ. 100ರಷ್ಟು ಮೊದಲ ಡೋಸ್ ಹಾಗೂ ಶೇ. 85ರಷ್ಟು ಎರಡನೇ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಅಲ್ಲದೇ ರಾಜ್ಯದಲ್ಲಿ 6 ಕೋಟಿಗಳಷ್ಟು ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದರು. ಅಲ್ಲದೇ ಅತಿವೃಷ್ಠಿ, ನೆರೆ ಹಾವಳಿಯ ಹಿನ್ನೆಲೆಯಲ್ಲಿ ಸರಕಾರ ಕೈಗೊಂಡ ಕ್ರಮಗಳು, ಗತ ವರ್ಷದಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆಯೂ ಉಲ್ಲೇಖ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!