ಗುಜರಾತ್ ಗಲಭೆಯಲ್ಲಿ ಸುಳ್ಳುಸಾಕ್ಷ್ಯಗಳ ಪ್ರಕರಣ- ಇದು ಕಾಂಗ್ರೆಸ್ಸಿನ ಅಹ್ಮದ್ ಪಟೇಲ್ ಮತ್ತು ತೀಸ್ತಾ ಸೆತಲ್ವಾಡ್ ತಾಳಮೇಳವೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
“2002ರ ಗುಜರಾತ್ ಗಲಭೆಯ ಕುರಿತಾಗಿ ತಿರುಚಿದ ಸಾಕ್ಷ್ಯಗಳನ್ನು ಸೃಷ್ಟಿಸಿದ ಪ್ರಕರಣದ ಹಿಂದೆ ಕಾಂಗ್ರೆಸ್‌ ನಾಯಕ ಅಹ್ಮದ್ ಪಟೇಲ್ ಕೈವಾಡವಿದೆ. ಅಹ್ಮದ್‌ ಪಟೇಲರ ಕುಮ್ಮಕ್ಕಿನಿಂದಲೇ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಗಲಭೆಯಲ್ಲಿ ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಂದಿನ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸುವುದರ ಜೊತೆಗೆ ಅಮಾಯಕರನ್ನು ಈ ಗಲಭೆಯಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ” ಎಂದು ಎಸ್‌ಐಟಿ ತಂಡ ಸೆಷನ್ಸ್ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಆದರೆ ಈ ಆರೋಪಗಳನ್ನು ಕಾಂಗ್ರೆಸ್‌ ನಿರಾಕರಿಸಿದೆ.
2002ರ ಗುಜರಾತ್ ಗಲಭೆಗೆ ಕುರಿತಾಗಿ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಪ್ರಕರಣದಲ್ಲಿ ತೀಸ್ತಾ ಸೆಟಲ್ವಾಡ್ ಹಾಗೂ ನಿವೃತ್ತ ಡಿಜಿಪಿ ಆರ್. ಬಿ ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಬಂಧನದಲ್ಲಿದ್ದಾರೆ.
ಇವರ ಮೇಲಿನ ಆರೋಪಗಳ ತನಿಖೆ ನಡೆಸುತ್ತಿರುವ ಗುಜರಾತ್ ವಿಶೇಷ ತನಿಖಾ ತಂಡ (ಎಸ್‌ಐಟಿ), ತೀಸ್ತಾ ದಿವಂಗತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿರ್ದೇಶನದಂತೆ ಈ ಪಿತೂರಿಯನ್ನು ನಡೆಸಿದ್ದಾರೆ. ಅಂದಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರರಾಗಿದ್ದ ಪಟೇಲ್ ಸಂಚು ರೂಪಿಸಿದ್ದರು ಎಂದು ಹೇಳಿದೆ.

ತನಿಖೆಯಲ್ಲಿ ಬಯಲಾಗಿದ್ದೇನು?
2002ರಲ್ಲಿ ಗೋಧ್ರಾ ರೈಲು ಬೆಂಕಿ ದುರಂತ ಘಟನೆ ನಡೆದ ಕೆಲ ದಿನಗಳಲ್ಲಿ ಗುಜರಾತ್‌ನಾದ್ಯಂತ ಗಲಭೆಗಳು ನಡೆದು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಾಗೂ ಪೋಲೀಸ್‌ ಅಧಿಕಾರಿಗಳಾದ ಸಂಜೀವ್ ಭಟ್ ಮತ್ತು ಶ್ರೀಕುಮಾರ್ ಒಟ್ಟಾಗಿ ಸೇರಿ ಈ ಗಲಭೆಯ ಹೊಣೆಯನ್ನು ಬಿಜೆಪಿ ಸರ್ಕಾರದ ತಲೆಗೆ ಕಟ್ಟಲು ವ್ಯವಸ್ಥಿತವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದರು ಎಂಬ ಆರೋಪವಿದೆ. ಅದರಲ್ಲಿಯೂ ತೀಸ್ತಾ ತಾನೇ ಹುಟ್ಟುಹಾಕಿದ್ದ ಎನ್‌ ಜಿಒ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ಆಮಿಷವೊಡ್ಡಿ ಗಲಭೆ ನಡೆದ ಸ್ಥಳದ ಪೊಲೀಸ್ ಠಾಣೆಗಳಲ್ಲಿ ಸುಳ್ಳುದೂರು ದಾಖಲಿಸುವುದು, ಸಾಕ್ಷ್ಯಾಧಾರಗಳನ್ನು ಸರ್ಕಾರಕ್ಕೆ ಮುಳುವಾಗುವಂತೆ ತಿರುಚುತ್ತಿದ್ದಳು ಎಂಬು ಆಕೆಯ ಮೇಲಿರುವ ಆರೋಪ. ಇದೀಗ ಎಸ್‌ಐಟಿ ಸಲ್ಲಿಸಿರುವ ಅಫಿಡವಿಟ್‌ ನಲ್ಲಿ ಆರೋಪಿಗಳ ಈ ಸಂಚಿನ ಹಿಂದೆ ಅಹ್ಮದ್‌ ಪಟೇಲ್‌ ರ ನಿರ್ದೇಶನ- ಪಾತ್ರವಿತ್ತು ಎಂಬ ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಎಲ್ಲಾ ಸಾಕ್ಷ್ಯಾಧಾರಗಳು ಆರೋಪಿಗಳ ಕೊರಳಿಗೆ ಮತ್ತಷ್ಟು ಬಿಗಿಯಾಗಿ ಸುತ್ತಿಕೊಳ್ಳುತ್ತಿದ್ದು, 20 ವರ್ಷಗಳ ಹಿಂದೆ ಏನಾಗಿತ್ತು ಎಂಬ ವಿಚಾರಗಳು ಒಂದೊಂದಾಗಿ ಹೊರಬೀಳುತ್ತಿದೆ.

ಆರೋಪಗಳನ್ನು ತಳ್ಳಿಹಾಕಿದ ಕಾಂಗ್ರೆಸ್
ಈ ಆರೋಪಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್, ಪಟೇಲ್ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಎಸ್‌ಐಟಿ ರಾಜಕೀಯದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಸೇಡಿನ ರಾಜಕೀಯದ ಭಾಗವಾಗಿದೆ ಎಂದು ಕಿಡಿಕಾರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!