ಹೊಸದಿಗಂತ ವರದಿ, ನಾಗಮಂಗಲ:
ನಾಗಮಂಗಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸುತ್ತಾರೆಂಬ ಭಯದಿಂದ ಊರು ಬಿಟ್ಟಿದ್ದ ಭದ್ರಿಕೊಪ್ಪಲಿನ ಯುವಕ ಕಿರಣ್ ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮೃತ ಕಿರಣ್ ಮನೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಬುಧವಾರ ಸಂಜೆ ಮೃತ ಕಿರಣ್ ಅವರ ಮನೆಗೆ ಭೇಟಿ ನೀಡಿ ಕಿರಣ್ ಪತ್ನಿ ಸೌಮ್ಯ ಮತ್ತು ತಾಯಿ ಶಶಿ, ಅವರಿಗೆ ಸಾಂತ್ವಾನ ಹೇಳಿ, ಕೆಲವೊಮ್ಮೆ ನಿರಪರಾಧಿಗಳಿಗೆ ಶಿಕ್ಷೆ ಆಗುತ್ತದೆ. ಘಟನೆಯಿಂದ ನೊಂದಿರುವ ಸೌಮ್ಯ ಅವರ ಜೀವನ ನಿರ್ವಹಣೆಗೆ ನಿಮಗೆ ಎಲ್ಲಾದರೊಂದು ಕೆಲಸ ಕೊಡಿಸುತ್ತೇನೆ ಧೈರ್ಯವಾಗಿರಿ ಎಂದು ಧೈರ್ಯ ತುಂಬಿದರು. ಈ ವೇಳೆ ವೈಯಕ್ತಿಕವಾಗಿ 50 ಸಾವಿರ ಸಹಾಯಧನ ನೀಡಿದರು.
ನಂತರ ಗ್ರಾಮದ ಮಹಿಳೆಯರು ಮತ್ತು ಹಿರಿಯರೊಂದಿಗೆ ಮಾತನಾಡಿದ ಸಚಿವರು, ಘಟನೆಯ ಹಿಂದೆ ಭದ್ರಿಕೊಪ್ಪಲು ಗ್ರಾಮದ ಯುವಕರು ಇಲ್ಲ ಎನ್ನುವ ಮಾಹಿತಿ ಇದೆ. ಗಲಾಟೆಗೆ ಬೇರೆಯವರ ಕುಮ್ಮಕ್ಕು ಕಾರಣವಾಗಿದೆ. ಯಾರು ಕಾರಣರು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ ಜೈಲಲ್ಲಿ ಇರುವವರು ಮತ್ತು ಭಯದಿಂದ ಊರು ಬಿಟ್ಟಿರುವವರು ಭಯಪಡುವ ಅಗತ್ಯವಿಲ್ಲ. ಜೈಲಲ್ಲಿರುವವರಿಗೆ ಜಾಮೀನು ಕೊಡಿಸಲು ನಮ್ಮ ಕಾರ್ಯಕರ್ತರು, ಲಾಯರ್‌ಗಳು ಓಡಾಡುತ್ತಿದ್ದಾರೆ. ಭಯದಿಂದ ಊರು ಬಿಟ್ಟಿರುವವರು ಧೈರ್ಯವಾಗಿ ಊರಿಗೆ ಬಂದು ಎಂದಿನಂತೆ ಇರಬಹುದು. ಯಾರನ್ನೂ ಅರೆಸ್ಟ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.