ಹೊಸದಿಗಂತ ವರದಿ,ಕಾರವಾರ:
ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ಬುಧವಾರ ಸಂಜೆ ತಮ್ಮ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.
ಸುದೀರ್ಘ ಅವಧಿಯಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶುಭಲತಾ ಅಸ್ನೋಟಿಕರ್ ಕೆಲ ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದರು. ಇವರ ಪತಿ ವಸಂತ ಅಸ್ನೋಟಿಕರ್ ಕಾರವಾರ ಶಾಸಕರಾಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು.
ವಿ.ಪ ಸದಸ್ಯರಾಗಿದ್ದ ಸಂದರ್ಭದಲ್ಲಿ ಶುಭಲತಾ ಅವರು ತಮ್ಮ ಮೃದು ಮಾತು, ಜನಪರ ನಿಲುವಿನಿಂದ ಜನರ ಮನ ಗೆದ್ದಿದ್ದರು.
ಪುತ್ರ ಆನಂದ ಅಸ್ನೋಟಿಕರ್ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಜೆಡಿಎಸ್ ನಲ್ಲಿ ಇದ್ದಾರೆ. ಶುಭಲತಾ ಅವರು ಪುತ್ರ ಆನಂದ, ಇಬ್ಬರು ಪುತ್ರಿಯರನ್ನು ಅಗಲಿದ್ದು ಗುರುವಾರ ಕಾರವಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.