ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮುವಿನಲ್ಲಿ ಚುನಾವಣಾ ರ‍್ಯಾಲಿಯನ್ನಿದ್ದೇಶಿಸಿ ಭಾಷಣ ಮಾಡುವ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಡವಟ್ಟು ಮಾಡಿದ್ದಾರೆ.
ಕಾಶ್ಮೀರಿ ಪಂಡಿತರು ಅನ್ನುವುದಕ್ಕೆ ಬದಲಾಗಿ ʻಪಾಕ್ ಆಕ್ರಮಿತ ಕಾಶ್ಮೀರʼದಿಂದ ಬಂದ ನಿರಾಶ್ರಿತರು ಎಂದು ಉಲ್ಲೇಖಿಸಿದ್ದಾರೆ. ಬಳಿಕ ಎಚ್ಚೆತ್ತುಕೊಂಡು ಮತ್ತೆ ಕಾಶ್ಮೀರಿ ಪಂಡಿತರು ಎಂದು ಹೇಳಿದ್ದಾರೆ.
ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪಿಒಕೆಯಿಂದ ಬಂದಿರುವ ನಿರಾಶ್ರಿತರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದ್ದಾರೆ. ಬಳಿಕ ಕ್ಷಮಿಸಿ, ಕಾಶ್ಮೀರಿ ಪಂಡಿತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ಹೇಳಿಕೆ ಕುರಿತ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ನಾಯಕರೂ ರಾಗಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಐಟಿ ಸೆಲ್ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ಪಿಒಕೆ ನಿರಾಶ್ರಿತರು ಮತ್ತು ಕಾಶ್ಮೀರಿ ಪಂಡಿತರ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಒಂದು ಕಡೆ ಸಾಗರೋತ್ತರ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ, ರಾಹುಲ್ ಗಾಂದಿ ಪಪ್ಪು ಅಲ್ಲ ಅಂತಾರೆ, ರಾಹುಲ್ ಗಾಂದಿ ಹೀಗೆ ಮಾಡ್ತಾರೆ. ಕಾಶ್ಮೀರದ ಅವ್ಯವಸ್ಥೆ ನೆಹರೂ ಅವರ ಪರಂಪರೆಯಾಗಿದೆ. ಅದು ಸಾಕಾಗಲ್ಲ ಅಂತ ಈಗ ರಾಹುಲ್ ಗಾಂಧಿ ಬಂದಿದ್ದಾರೆ. ಅದಕ್ಕೆ ಅವರ ಇಂದಿನ ಹೇಳಿಕೆಯೇ ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.