ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯ ನಿವೃತ್ತಿ ಕುರಿತು ಸಾರ್ವಜನಿಕವಾಗಿ ಪದೇ ಪದೆ ಹೇಳಿಕೆ ನೀಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ದೆಹಲಿ ಪ್ರವಾಸದ ವೇಳೆ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಸಿದ್ದರಾಮಯ್ಯ, ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ನಿವೃತ್ತಿ ಹೇಳಿಕೆಯ ಕುರಿತು ಸಿದ್ದರಾಮಯ್ಯ ಸ್ಪಷ್ಟನೆ
ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಕುರಿತು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿವೆ. ಈ ಕುರಿತು ರಾಹುಲ್ ಗಾಂಧಿ, ಇಂತಹ ಹೇಳಿಕೆಗಳನ್ನು ಪದೇಪದೇ ಸಾರ್ವಜನಿಕವಾಗಿ ನೀಡುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಬಹುದು. ಅಲ್ಲದೆ, ಸಾರ್ವಜನಿಕರಿಗೆ ಪಕ್ಷದ ನಾಯಕತ್ವದ ಕುರಿತು ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜಕೀಯ ನಿವೃತ್ತಿ ವಿಚಾರವನ್ನು ಬಹಿರಂಗವಾಗಿ ಪ್ರಸ್ತಾಪಿಸದಿರುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ:
ರಾಹುಲ್ ಗಾಂಧಿ ಅವರ ಸಲಹೆಗೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಮ್ಮ ಹೇಳಿಕೆಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಸಾಧ್ಯತೆಯ ಬಗ್ಗೆ ಮಾತ್ರ ತಾವು ಮಾತನಾಡಿದ್ದಾಗಿ ಅವರು ತಿಳಿಸಿದ್ದಾರೆ.
ವಯಸ್ಸಿನ ಕಾರಣದಿಂದ ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಕಷ್ಟವಾಗಬಹುದು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೇನೆಯೇ ಹೊರತು, ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ರಾಜ್ಯ ರಾಜಕೀಯದ ಹಲವು ಪ್ರಮುಖ ವಿಚಾರಗಳೂ ಉಭಯ ನಾಯಕರ ಚರ್ಚೆಯಲ್ಲಿ ಪ್ರಸ್ತಾಪವಾಗಿವೆ ಎಂದು ತಿಳಿದುಬಂದಿದೆ.



