May 20, 2026
Wednesday, May 20, 2026
spot_img

ಊರಿನ ಜನರ ಕನಸಿಗೆ ಕೊಳ್ಳಿ ಇಡಬೇಡಿ: ಶಾಲೆ ಮುಚ್ಚಲು ಮುಂದಾದ ಸರಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಹೊಸ ದಿಗಂತ ವರದಿ, ಬೆಳಗಾವಿ :

ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಬೆಳಗಾವಿ ತಾಲೂಕಿನ ಹಳ್ಳೂರ ಶಾಲೆ ಮುಚ್ಚಿ ಸುಳೆಬಾವಿ ಶಾಲೆಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬುಧವಾರ ಗ್ರಾಮಸ್ಥರು, ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಎದರು ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ನಡೆಸಿದರು.

ನಮ್ಮೂರ ಸರ್ಕಾರಿ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಿಸುವುದಕ್ಕೆ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸರ್ಕಾರಕ್ಕೆ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಿದರು.

ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ

ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಶಿಕ್ಷಣ ಉಳಿಸಿ ಸಮಿತಿಯ ಭರಮಪ್ಪ ಸನದಿ ಅವರು ಮಾತನಾಡಿ, ನಮ್ಮೂರಿಗೆ ಬಸ್ಸೇ ಇಲ್ಲ. ನಾವೆಲ್ಲ ಕೂಲಿ ಮಾಡುವ ಬಡಜನರು. ಸರ್ಕಾರ ಶಾಲೆ ಮುಚ್ಚಿ ನಮ್ಮಂತ ಬಡವರ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ನಮ್ಮೂರ ಶಾಲೆಯ ಮುಚ್ಚಬಾರದು

ನಾವುಗಳು ಬೆಳಗ್ಗೆ 6 ಗಂಟೆಗೆ ದುಡಿಯಲು ಹೋಗುತ್ತೇವೆ. ನಮ್ಮ ಮಕ್ಕಳು ಎದ್ದು ಊರಲ್ಲೇ ಇರುವ ಶಾಲೆಗೆ ಬರುವುದು ಕಷ್ಟ. ಇನ್ನು ಸುಳೆಬಾವಿಗೆ ಹೋಗಿ ನಮ್ಮ ಮಕ್ಕಳು ಕಲಿಯಲು ಸಾಧ್ಯವಿಲ್ಲ. ಸರ್ಕಾರ ನಮ್ಮೂರ ಶಾಲೆಯನ್ನು ಮುಚ್ಚಬಾರದು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಭಯ

ಇದೇ ವೇಳೆ ಎಐಡಿಎಸ್ಓ ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ್ ಮಾತನಾಡಿ, ಹಳ್ಳೂರಿನ ಬಹುತೇಕ ಜನರ ಗರಿಷ್ಠ ಶಿಕ್ಷಣ ಮಟ್ಟ ಪ್ರಾಥಮಿಕ ಶಿಕ್ಷಣ ಊರಲ್ಲಿ ಸರ್ಕಾರಿ ಶಾಲೆ ಇರುವುದರಿಂದ ಈ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆ. ಇಂತಹ ಊರಿನಲ್ಲಿ ಶಾಲೆ ಇಲ್ಲದಿದ್ದರೆ ಗುಡ್ಡದ ಮೇಲೆ ಈ ಊರಿನ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಊರಿನ ಬಹುತೇಕ ಯುವಕರು ಬೆಳಿಗ್ಗೆಯಿಂದ ಸಂಜೆವರೆಗೆ ಕಟ್ಟಡ ಕಾರ್ಮಿಕರಾಗಿ ಕಷ್ಟಪಟ್ಟು ದುಡಿಯುತ್ತಾರೆ. ತಮ್ಮ ಮಕ್ಕಳಾದರೂ ಓದಿ ಉತ್ತಮ ಜೀವನ ನಡೆಸಬೇಕೆಂಬುದು ಇವರ ಆಶಯ. ಆದರೆ ಸರ್ಕಾರವು ಈ ಊರಿನ ಜನರ ಕನಸಿಗೆ ಕೊಳ್ಳಿ ಇಡುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು ಇಂತಹ ಜನರ ಬದುಕಿನತ್ತ ಗಮನಹರಿಸಿ ಊರಿನ ಸರ್ಕಾರಿ ಶಾಲೆಗಳನ್ನು ಮುಚ್ಚುವ ತನ್ನ ನಿರ್ಧಾರವನ್ನು ಕೈಬಿಡಬೇಕು ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ವೇಳೆ ಭರಮಪ್ಪ ಕಾಲೇರಿ, ಭರಮಪ್ಪ ಕಣಬರಗಿ, ಸಂಜು ಹೊನಕೇರಿ ಪೋಷಕರು ಗ್ರಾಮಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !