ತೋರಣಗಲ್ ಕೋವಿಡ್-19 ಪ್ರಕರಣ ಪತ್ತೆ: ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

ಹೊಸದಿಗಂತ ವರದಿ,ಬಳ್ಳಾರಿ (ತೋರಣಗಲ್):

ಕೋವಿಡ್-19 ಮೊದಲ ಅಲೆಗಿಂದ ಎರಡನೇ ಅಲೆಯಲ್ಲಿ ಹೆಚ್ಚು ಸೊಂಕಿತರು ಪತ್ತೆಯಾಗುವ ಮೂಲಕ ಇಲ್ಲಿನ ತೋರಣಗಲ್ ಪಟ್ಟಣದ ಜಿಂದಾಲ್ ಸಂಸ್ಥೆ ದೇಶಾದ್ಯಂತ ಹೆಚ್ಚು ಸುದ್ದಿಯಲ್ಲಿತ್ತು. ಮೂರನೇ ಅ‌ಲೆ ಶುರುವಾಗುವ ‌ಮುನ್ನವೇ ಮತ್ತೆ ತೋರಣಗಲ್ ‌ಪಟ್ಟಣದಲ್ಲಿ ಬುಧವಾರ 13 ಪ್ರಕರಣಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ತೋರಣಗಲ್ ಪಟ್ಟಣದಲ್ಲಿ ಜಿಂದಾಲ್ ಬೃಹತ್ ಉಕ್ಕು ಕಾರ್ಖಾನೆ ಇರುವ ಹಿನ್ನಲೆ, ರಾಜ್ಯ ಸೇರಿದಂತೆ ದೇಶದ ನಾನಾ ಮೂಲೆಗಳಿಂದ ಆಗಮಿಸಿದ ಜನರು‌ ವಾಸವಾಗಿದ್ದು, ಕಂಪನಿಯ ಕಾಲೋನಿಯಲ್ಲೂ ಸುಮಾರು‌ ಜನರು ವಾಸವಾಗಿದ್ದಾರೆ. ಮತ್ತೆ ಎರಡನೇ ಅಲೆಯಂತೆ ತೋರಣಗಲ್ ಹಾಟ್ ಸ್ಪಾಟ್ ಆಗಲಿದೆಯಾ ಎನ್ನುವ ಚೆರ್ಚೆಗಳು ಶರುವಾಗಿವೆ. ತೋರಣಗಲ್ ‌ಪಟ್ಟಣದಲ್ಲಿ 3, ಜಿಂದಾಲ್ ಕಾರ್ಖಾನೆಯ ವಿದ್ಯಾನಗರದಲ್ಲಿ 4, ಎನ್ ಎಂಡಿಸಿಯಲ್ಲಿ 5 ಹಾಗೂ ರೈಲ್ವೆ ನಿಲ್ದಾಣದ ಪ್ರದೇಶದಲ್ಲಿ 1‌ಪ್ರಕರಣ‌ ಪತ್ತೆಯಾಗಿದೆ.
ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ: ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ‌ಪವನ್‌ ಕುಮಾರ್ ಮಲಪಾಟೆ‌ ಅವರು ಪಟ್ಟಣಕ್ಕೆ‌ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಗ್ರ ಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ‌ನಿರ್ಲಕ್ಷ್ಯ ಬೇಡ, ನಮ್ಮ ಎಲ್ಲ ಅಧಿಕಾರಿಗಳು ಎಚ್ಚರದಿಂದ ಕೆಲಸ ನಿರ್ವಹಿಸಬೇಕು, ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ, ನಾನಾ ಸಮಸ್ಯೆ ಎದುರಾಗಲಿದೆ. ಕೋವಿಡ್-19 ಪ್ರಕರಣ ಪತ್ತೆಯಾದ ಪ್ರದೇಶಗಳಲ್ಲಿ ಆಗಾಗ್ಗೆ ಭೇಟಿ‌ನೀಡಿ ಪ್ತಾಥಮಿಕ ಸಂಪರ್ಕ ಹೊಂದಿರುವವರ ಮೇಲೆ‌ ಹಾಗೂ ಸೊಂಕಿತರ ಬಗ್ಗೆ ತೀವ್ರ ನಿಗಾವಹಿಸಬೇಕು, ಪ್ರತಿಯೋಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಬೇಕು, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜೀಯಾಗಕೂಡದು ಎಂದು ಸೂಚಿಸಿದರು. ನಾಗರಿಕರು ಕೊರೋನಾ ಮೂರನೇ ಅಲೆ, ಒಮಿಕ್ರಾನ್ ‌ಬಗ್ಗೆ ಭಯಪಡುವುದು ಬೇಡ, ಆದರೇ, ಎಚ್ಚರಿಕೆ ಅಗತ್ಯ, ಸರ್ಕಾರದ ನಿಯಮವನ್ನು ಎಲ್ಲರೂ ತಪ್ಪದೇ ಪಾಲನೆ ಮಾಡಬೇಕು ಎಂದು‌ ಹೇಳಿದರು. ಎಲ್ಲ ಸೊಂಕಿತರಿಗೆ‌ ಚಿಕಿತ್ಸೆ ಮುಂದುವರೆದಿದ್ದು, ಪ್ರಾಥಮಿಕ ಸಂಪರ್ಕ ಹೊಂದಿರುವವರ ಬಗ್ಗೆ ನಿಗಾ ವಹಿಸಲಾಗಿದೆ. ಅವರ ದ್ರವದ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಎಸ್ಪಿ ಸೈದಲು ಅಡಾವತ್, ಅಪರ ಜಿಲ್ಲಾಧಿಕಾರಿ ‌ಮಂಜುನಾಥ್ ಸೇರಿದಂತೆ ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!