6 ವರ್ಷದ ಹಿಂದೆ ಜೋಡಿಕೊಲೆ: ಡಿಎನ್‌ಎ ಪರೀಕ್ಷೆಗೆ ಮೂಳೆ ಶೋಧಿಸಿದ ತಂಡ

ಹೊಸದಿಗಂತ ವರದಿ ಅಂಕೋಲಾ:

ಆರು ವರ್ಷಗಳ ಹಿಂದೆ ನಡೆದಿರುವ ಜೋಡಿ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನದಂತೆ ಅಂಕೋಲಾ ತಾಲೂಕಿಗೆ ಆಗಮಿಸಿದ ಅಧಿಕಾರಿಗಳ ತಂಡ
ಡಿಎನ್ಎ ಪರೀಕ್ಷೆಗಾಗಿ ಸುಮಾರು 6 ವರ್ಷಗಳ ಹಿಂದೆ ದಫನ್ ಮಾಡಲಾದ ಮೃತ ದೇಹಕ್ಕಾಗಿ ಶೋಧ ನಡೆಸಿರುವುದಾಗಿ ತಿಳಿದು ಬಂದಿದೆ.

ಅಂಕೋಲಾ ಕೋಟೆವಾಡದ ಸ್ಮಶಾನ ಭೂಮಿಯಲ್ಲಿ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳ ಸಹಕಾರಲ್ಲಿ ಶವ ಹೂತ ಸ್ಥಳ ಅಗೆಯುವ ಕೆಲಸ ಮಾಡಲಾಯಿತಾದರೂ ಮೃತ ದೇಹದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

2017 ರ ಮಾರ್ಚ್ 6 ರಿಂದ ಮಾರ್ಚ್ 18 ರ ನಡುವಿನ ಅವಧಿಯಲ್ಲಿ ಕಾರವಾರ ಕಾಜುಭಾಗ ನಿವಾಸಿ ಅಯಾಜ್ ಶೇಖ್ (35) ಮತ್ತು ಗೋವಾ ನಿವಾಸಿ ಆಶಿಷ್ ರಂಜನ್ (35) ಎನ್ನುವವರನ್ನು ಯಾರೋ ಕೊಲೆ ಮಾಡಿ ಎಸೆದಿರುವ ಕುರಿತು ಮೃತ ಅಯಾಜ ಸಹೋದರ 2017 ರ ಮಾರ್ಚ್ 28 ರಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಾರವಾರದಲ್ಲಿ ಮೊಬೈಲ್ ಪೋನ್ ಅಂಗಡಿ ನಡೆಸುತ್ತಿದ್ದ ಅಯಾಜ ಶೇಖ್ 2017 ರ ಮಾರ್ಚ್ 6 ರಂದು ಕಾರವಾರದಿಂದ ಗೋವಾಕ್ಕೆ ತೆರಳಿ ಅಲ್ಲಿ ತನ್ನ ಸ್ನೇಹಿತ ಆಶಿಷ್ ರಂಜನ್ ಜೊತೆ ಸೇರಿ ಬೆಳಗಾವಿಗೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದು 2017 ರ ಮಾರ್ಚ್ 10 ರಂದು ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕಸಾಳದಲ್ಲಿ ಆಶಿಷ್ ರಂಜನ್ ಮೃತ ದೇಹ ಪತ್ತೆಯಾಗಿತ್ತು,ಮತ್ತು ಮಾರ್ಚ್ 18 ರಂದು ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಬೈಲ್ ಘಟ್ಟದಲ್ಲಿ ಅಯಾಜ ಮೃತದೇಹ ದೊರಕಿತ್ತು.

ಮೃತ ದೇಹ ದೊರಕಿದ ಸಂದರ್ಭದಲ್ಲಿ ಮೃತ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ದೊರಕದ ಕಾರಣ ಕೋಟೇವಾಡದ ಸ್ಮಶಾನ ಭೂಮಿಯಲ್ಲಿ ಆಶಿಷ್ ರಂಜನ್ ಮೃತ ದೇಹವನ್ನು ಹೂತು ಹಾಕಲಾಗಿತ್ತು.
ಅಯಾಜ್ ಮೃತ ದೇಹ ಪತ್ತೆಯಾದ ನಂತರ ಇಬ್ಬರನ್ನೂ ಯಾರೋ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಬೇರೆ ಬೇರೆ ಕಡೆ ಮೃತದೇಹಗಳನ್ನು ಎಸೆದು ಹೋಗಿರುವ ಕುರಿತು ದೂರು ದಾಖಲಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ಯಲ್ಲಾಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಕೊಲೆಯಾಗಿದ್ದಾನೆ ಎನ್ನಲಾಗಿರುವ ವ್ಯಕ್ತಿಯ ಮೃತ ದೇಹ ಹೂಳಲಾದ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ತಂಡ ಅಂಕೋಲಾಕ್ಕೆ ಆಗಮಿಸಿ ಕೋಟೇವಾಡದ ಸ್ಮಶಾನ ಭೂಮಿಯಲ್ಲಿ ವ್ಯಕ್ತಿಯನ್ನು ಹೂತ ಸ್ಥಳದಲ್ಲಿ ಜೆಸಿಬಿ ಮೂಲಕ ಅಗೆದು ಪರಿಶೀಲನೆ ನಡೆಸಿದ್ದು ನಂತರ ಕಾರವಾರದಲ್ಲಿ ಅಯಾಜ್ ಶವ ಹೂತ ಸ್ಥಳಕ್ಕೆ ತೆರಳಿ ಅಲ್ಲಿ ಹೂತಿರುವ ಮೃತ ದೇಹದ ಭಾಗಗಳನ್ನು ಪರೀಕ್ಷೆಗೆ ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಅಶ್ಪಾಕ್ ಖತೀಬ, ಇರ್ಫಾನ್ ಮೊಮೀನ್ ಮತ್ತು ತೌಹಿದ್ ಖಾಜಿ ಎನ್ನುವವರನ್ನು ವಿಶೇಷ ಪೊಲೀಸ್ ತಂಡ ಬಂಧಿಸಿದ್ದು ಕೊಲೆಯಾದ ಆಶಿಷ್ ರಂಜನ್ ಝಾರ್ಕಂಡ್ ಮೂಲದವನಾಗಿದ್ದು ಕಾರವಾರದ ಅಯಾಜ್ ಶೇಖ್ ಜೊತೆ ಸೇರಿ ಎನ್. ಜಿ.ಓ ಹೆಸರಿನಲ್ಲಿ ಹಣ ಸಂಗ್ರಹಿಸುವ ಮತ್ತು ಎನ್. ಜಿ.ಓ ಖಾತೆಗಳನ್ನು ಹ್ಯಾಕ್ ಮಾಡಿ ತಮ್ಮ ವಿದೇಶಿ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು, ಇವರು ಮುಂಬೈ ಮೂಲದ ಭೂಗತ ಪಾತಕಿಗಳಾದ ರಶೀದ ಮಲ್ಬಾರಿ ಮತ್ತು ಸಲ್ಮಾನ್ ಅವರ ಸಂಪರ್ಕದಲ್ಲೂ ಇದ್ದರು ಎನ್ನಲಾಗಿದೆ.

ಇವರ ಕೃತ್ಯಗಳ ಕುರಿತು ಅರಿತ ರಶೀದ ಮಲ್ಬಾರಿ ತಂಡ ಇಬ್ಬರನ್ನೂ ಬೆಳಗಾವಿಗೆ ಕರೆದುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಹಣ ಇಲ್ಲ ಎಂದು ಯುವಕರು ಸುಳ್ಳು ಹೇಳಿದ ಕಾರಣ ಮಲ್ಬಾರಿ ಗ್ಯಾಂಗ್ ಯುವಕರ ಹತ್ಯೆ ಮಾಡಿ ಮೃತದೇಹಗಳನ್ನು ಬೇರೆ ಬೇರೆಯಾಗಿ ಎಸೆದು ಹೋಗಿದ್ದರು ಎಂದು ಪೊಲೀಸರ ಆರಂಭಿಕ ತನಿಖೆಯಲ್ಲಿ ತಿಳಿದು ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!