ದಿಗಂತ ವರದಿ ಕಲಬುರಗಿ:
ಇತ್ತೀಚೆಗೆ (ಜ.19ರಂದು) ಪ್ರಕಟಗೊಂಡ ಪೋಲೀಸ ಸಬ್ ಇನ್ಸ್‍ಪೆಕ್ಟರ್ (ಪಿಎಸ್‍ಐ) ಹುದ್ದೆಗಳ ನೇಮಕಾತಿಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಇಬ್ಬರು ಕುವರಿಯರು ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿ ಗ್ರಾಮಕ್ಕೆ ‘ಡಬಲ್ ಪಿಎಸ್‍ಐ ಗರಿ’ ನೀಡಿ ಸಾಧನೆ ಮೆರೆದಿದ್ದಾರೆ.
ರೇವತಿ ಎಸ್. ಪಾಟೀಲ್ ಹಾಗೂ ಸಂಧ್ಯಾರಾಣಿ ಎಚ್. ಕುರನಳ್ಳಿ ಅವರೇ ನೂತನವಾಗಿ ಪಿಎಸ್‍ಐಯಾಗಿ ಸಾಧನೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ವೃಂದದ 25 ಹುದ್ದೆಗಳ ನೇಮಕಾತಿಯಲ್ಲಿ ರೇವತಿ (14ನೇ ರ್ಯಾಂಕ್), ಸಂಧ್ಯಾರಾಣಿ (25ನೇ ರ್ಯಾಂಕ್) ಗಿಟ್ಟಿಸಿ, ಸ್ಪರ್ಧಾಕಾಂಕ್ಷಿಗಳಿಗೆ ಸ್ಪೂರ್ತಿಯಾಗಿದ್ದಾರೆ.
ಸದ್ಯ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಪೆÇಲೀಸ ಠಾಣೆಯಲ್ಲಿ ಕಳೆದ ವರ್ಷದಿಂದ ಪೆÇಲೀಸ ಕಾನ್ಸ್‍ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರೇವತಿ ಶಾಂತಗೌಡ ಪಾಟೀಲ್, ಕೆಲಸದ ವೇಳೆಯಲ್ಲೂ ನಿರಂತರ ಅಭ್ಯಾಸ ಮಾಡುತ್ತ ಛಲ ಬಿಡದೇ ಕೊನೆಗೆ ಪಿಎಸ್‍ಐ ಹುದ್ದೆಯ ಅಲಂಕರಿಸಿಯೇ ಬಿಟ್ಟಿದ್ದಾಳೆ.
ಇನ್ನೋರ್ವ ಕು. ಸಂಧ್ಯಾರಾಣಿ ಹುಸೇನಪ್ಪ ಕುರನಳ್ಳಿ ಎಂಬವರು ಇತ್ತೀಚೆಗೆ ನೀರಾವರಿ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್ (ಎಇ) ಆಗಿ ಆಯ್ಕೆಯಾಗಿದ್ದಳು. ಇದೀಗ ಪಿಎಸ್‍ಐ ಹುದ್ದೆಯೂ ಸಹ ಬೆನ್ನಟ್ಟಿ ಬಂದಿದೆ. ಸಂಧ್ಯಾರಾಣಿಗೂ ಡಬಲ್ ಹುದ್ದೆಗಳು ಹುಡುಕಿಕೊಂಡು ಬಂದಿರುವುದು ಕಷ್ಟಪಟ್ಟರೇ ಎಲ್ಲವೂ ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ.
ಯಳಸಂಗಿ ಗ್ರಾಮದ ಕುವರಿದ್ವಯರ ಸಾಧನೆಗೆ ಊರಿನ ಶಾಲಾ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.