ಹೊಸದಿಗಂತ ವರದಿ, ಮಂಗಳೂರು:
ಇಲ್ಲಿನ ಎನ್‌ಐಟಿಕೆ ಸುರತ್ಕಲ್‌ನಲ್ಲಿ ಮಾ.೬ರವರೆಗೆ ಆಯೋಜಿಸಿರುವ ವಾರ್ಷಿಕ ತಾಂತ್ರಿತ ಉತ್ಸವ `ಇನ್ಸಿಡೆಂಟ್ ೨೨’ ಮತ್ತು `ಇಂಜಿನಿಯರ್ ೨೨’ ಇದರ ೧೬ನೇ ಆವೃತ್ತಿಯನ್ನು ಉನ್ನತ ಶಿಕ್ಷಣ, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ. ಉದ್ಯಮ ಶೀಲತೆ-ಜೀವನೋಪಾಯ ಇಲಾಖೆ ಸಚಿವ ಡಾ.ಅಶ್ವತ್ಥನಾರಾಯಣ ಸಿ.ಎನ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ವ್ಯಕ್ತಿತ್ವನ್ನು ರೂಪಿಸಿಕೊಳ್ಳುವುದರೊಂದಿಗೆ ಬದ್ಧತೆಯಿಂದ ಗುರಿ ಸಾಧನೆಯೆಡೆಗೆ ಹೆಜ್ಜೆ ಇಡಬೇಕು. ಜೀವನಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಅಕ್ಷರ ಸಂತ ಹರೇಕಳ ಹಾಜಬ್ಬ ಮತ್ತು ನೀರಿಗಾಗಿ ಸುರಂಗ ಕೊರೆದ ಭಗೀರಥ ಅಮೈ ಮಹಾಲಿಂಗ, ಸುರತ್ಕಲ್ ನ ವೈದ್ಯಾಧಿಕಾರಿ ಡಾ.ಸೌಜನ್ಯ ಜೆ. ಅಂಚನ್ ಅವರನ್ನು ಸನ್ಮಾನಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಮುಖ್ಯ ಅಥಿತಿಗಳಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕ ಪ್ರೊ.ಉದಯಕುಮಾರ್ ಆರ್.ಯರಗಟ್ಟಿ(ಪ್ರಭಾರ), ಎನ್‌ಐಟಿಕೆ ಅಭಿವೃದ್ಧಿ ವಿಭಾಗದ ಡೀನ್ ಪ್ರೊ.ನರೇಂದ್ರನಾಥ ಎಸ್, ಕಾರ್ಯಕ್ರಮ ಸಂಘಟಕರಾದ ಶ್ರೀಹರಿ, ಅಭಯ್ ಮಿಶ್ರಾ ಮತ್ತಿತರರು ಉಪಸ್ಥಿತರಿದ್ದರು.
ತಾಂತ್ರಿಕ ಉತ್ಸವದ ಅಂಗವಾಗಿ ಟೆಕ್ನೈಟ್ಸ್, ಟ್ರೋನಿಕ್ಸ್, ಇ-ಬೈಕ್ ಎಕ್ಸ್‌ಪೋ, ಸ್ಟ್ಯಾರಿನೈಟ್ಸ್, ಲೇಸರ್ ಶೋಗಳು ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಎಲೆಕ್ಟ್ರೋ-ಮೆಕ್ಯಾನಿಕಲ್ ಪ್ರದರ್ಶನ, ಖ್ಯಾತ ಜಾದೂಗಾರ ಕರಣ್ ಸಿಂಗ್ ಅವರಿಂದ ಮ್ಯಾಜಿಕ್ ಪ್ರದರ್ಶನವನ್ನೂ ಆಯೋಜಿಸಲಾಗಿದೆ.